ಗುರುಗ್ರಹ ಸಮಾನ್ಯವಾಗಿ ಸಂಪೂರ್ಣ ರಾಶಿಚಕ್ರವನ್ನು ಸುತ್ತಲು ಹನ್ನೆರಡು ವರ್ಷಗಳ ಕಾಲಾವಧಿಯನ್ನು ತೆಗೆದುಕೊಳ್ಳುತ್ತಾನೆ. ಆದ್ದರಿಂದ, ಪ್ರತಿಯೊಂದು ರಾಶಿಯಲ್ಲಿ ಗುರುವಿನ ಸ್ಥಿತಿಯ ಪರಿಮಾಣ ಸರಿಸುಮಾರು ಒಂದು ವರ್ಷಗಳಷ್ಟಾಗಿರುತ್ತದೆ. ಗ್ರಹಗತಿಗಳಲ್ಲಿ ಉಂಟಾಗುವ ವಕ್ರೀ, ಸ್ತಂಭೀ ಚಾರಣಗತಿಗಳಿಂದಾಗಿ ಈ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚು-ಕಡಿಮೆ ಅವಧಿಯ ಅಂತರವನ್ನು ಕಾಣುತ್ತೇವೆ.
ಈ ವರ್ಷ ಮೇ ೮, ೨೦೧೧ ರಂದು ಮಧ್ಯಾಹ್ನ ೦೨-೧೨ಗಂಟೆಗೆ ಗುರು ಮೇಷರಾಶಿಯಲ್ಲಿ ಪ್ರವೇಶಮಾಡಿರುತ್ತಾನೆ.
ಪ್ರತಿಯೊಬ್ಬರ ಜನ್ಮರಾಶಿಯಲ್ಲಿ ಗುರು ಜನ್ಮಸ್ಥನಾಗಿ ಬರುವ ಯೋಗ ಹನ್ನೆರಡು ವರ್ಷಗಳಿಗೊಮ್ಮೆ ಘಟಿಸುತ್ತದೆ. ಇಷ್ಟು ದೀರ್ಘ ಕಾಲಾವಧಿಯ ಅಂತರದಲ್ಲಿ ಬರುವ ಈ ಯೋಗ ತನ್ನ ವಿಶೇಷ ಪ್ರಭಾವವನ್ನು ಹೊಂದಿರುತ್ತದೆ.
ದ್ವಾದಶರಾಶಿಗಳಲ್ಲಿ ನಿರಂತರ ನಡೆಯುತ್ತಿರುವ ಗ್ರಹಗಳ ಗತಿಯನ್ನು “ಗೋಚಾರ” ಎಂದು ಜ್ಯೋತಿಷ್ಯದಲ್ಲಿ ಕರೆಯಲಾಗುತ್ತದೆ. ಜನ್ಮಪತ್ರಿಕೆಯಲ್ಲಿ ವಿವಿಧ ಸ್ಥಾನಗಳಲ್ಲಿ ಸ್ಥಿತ ಗ್ರಹಗಳು ಆ ಸಮಯದ ಗ್ರಹಗೋಚಾರವೇ ಆಗಿವೆ. ಹೀಗಾಗಿ ಜನ್ಮಪತ್ರಿಕೆ ಜನ್ಮಸಮಯದ ಗೋಚಾರದ ಪಟ್ಟಿಯೇ ಆಗಿದೆ. ಜನ್ಮಪತ್ರಿಕೆಯಲ್ಲಿಯ ಗ್ರಹಗಳು ಆಯುಷ್ಯದುದ್ದಕ್ಕು ಪ್ರಭಾವವನ್ನು ಹೇಗೆ ಬೀರುತ್ತವೇಯೋ, ಜೀವನದ ವಿವಿಧ ಕಾಲಖಂಡದಲ್ಲಿ ಅದೇ ಗ್ರಹಗಳು ವಿವಿಧ ರಾಶಿ-ಸ್ಥಾನಗಳಲ್ಲಿ ಸ್ಥಿತವಾಗಿ ಈ ಪ್ರಭಾವಕ್ಕೆ ಪೂರಕ ಅಥವಾ ವಿರೋಧಕಗಳಾಗಿರುತ್ತವೆ. ಆದ್ದರಿಂದ ಪ್ರಸಕ್ತ ಸಮಯದ ಗೋಚರಿ ಗ್ರಹಗಳ ಫಲಾಫಲ ವಿಚಾರವನ್ನು ಅವಶ್ಯವಾಗಿ ಮಾಡಲೇಬೇಕು. ಮೂಹುರ್ತಾದಿ ಗಣಿತಗಳಿಗೆ ಇದು ಅತೀ ಅವಶ್ಯಕ.
ಗುರುಗ್ರಹ ಧನು ಮತ್ತು ಮೀನರಾಶಿಗಳ ಅಧಿಪತಿಯಾಗಿದ್ದು ಕರ್ಕ, ಮಕರ ರಾಶಿಗಳಲ್ಲಿರುವಾಗ ಕ್ರಮವಾಗಿ ಉಚ್ಚ ಮತ್ತು ನೀಚವಾಗಿರುತ್ತದೆ. ಧನುವು ಈ ಗ್ರಹಕ್ಕೆ ಮೂಲತ್ರಿಕೋಣ ರಾಶಿ.
ಬೃಹತ್ಪರಾಶರಿಯಲ್ಲಿ ಗುರುವಿನ ಸ್ವರೂಪವನ್ನು ಈ ರೀತಿ ವರ್ಣಿಸಿರುತ್ತಾರೆ –
ಬ್ರಹದ್‍ಗಾತ್ರೋ ಗುರುಶ್ಚೈವ ಪಿಂಗಲೋ ಮೂರ್ದಜೇಕ್ಷಣೈಃ |
ಕಫಪ್ರಕೃತಿಕೋ ಧಿಮಾನ್ ಸರ್ವಶಾಸ್ತ್ರವಿಶಾರದಃ || (ಬೃ-ಪ-ಹೋ ೦೩-೨೮)
ಬೃಹತ್ತಾದ ದೇಹ, ಹಳದಿ ಬಣ್ಣದ ನೇತ್ರಗಳು ಮತ್ತು ಕೇಶಗಳುಳ್ಳ, ಕಫಪ್ರಕೃತಿಯುಳ್ಳವನೂ, ಸರ್ವಶಾಸ್ತ್ರಗಳನ್ನು ಬಲ್ಲವನೂ, ಬುದ್ಧಿವಂತನಾದವನು ಇವು ಗುರುವಿನ ಲಕ್ಷಣ.
ಮಂತ್ರೇಶ್ವರರ ಪ್ರಕಾರ –
ಪೀತದ್ಯುತಿಃ ಪಿಂಗಕಚೇಕ್ಷಣಃ ಸ್ಯಾತ್ ಪೀನೋನ್ನತೋರಾಚ್ಚ ಬೃಹಶ್ಚರೀರಃ |
ಕಫಾತ್ಮಕಃ ಶ್ರೇಷ್ಠಮತಿಃ ಸುರೇಢ್ಯಃ ಸಿಂಹಾಬ್ಜನಾದಶ್ಚ ವಸುಪ್ರಧಾನಃ || (ಫ-ದೀ ೦೨-೧೨)
ಗುರುವು ಹಳದಿ ಬಣ್ಣದ ಕಾಂತಿಯುತ ಶರೀರ ಉಳ್ಳವನು ನೀಲಿ ಮತ್ತು ಹಳದಿ ಮಿಶ್ರಿತ ಬಣ್ಣದ ಕಣ್ಣು ಮತ್ತು ಕೂದಲು ಉಳ್ಳವನು, ಸ್ಥೂಲ ಮತ್ತು ಎತ್ತರವಾದ ದೊಡ್ಡ ಗಾತ್ರದ ಶರೀರ ಉಳ್ಳವನು, ಕಫ ಪ್ರಕೃತಿಯವನು, ಶ್ರೇಷ್ಟವಾದ ಬುದ್ಧಿ ಉಳ್ಳವನು, ಸಿಂಹದ ಘರ್ಜನೆಯಂತೆ ಸ್ವರ ಉಳ್ಳವನು, ಧನಕಾರಕನು, ಮಂತ್ರಿಯು ಆಗಿರುತ್ತಾನೆ.
ಗುರು ಶಬ್ದದ ಅರ್ಥವೇ ದೊಡ್ಡಗಾತ್ರದವನು, ಭಾರವಾದಂತವನು ಎಂಬುದಾಗಿದೆ.
ಫಲದೀಪಿಕಾ ಮತದಂತೆ ಗುರುವಿನಿಂದ ಚಿಂತಿಸಬೇಕಾದ ವಿಷಯಗಳು –
ಜ್ಞಾನಂ ಸದ್ಗುಣಮಾತ್ಮಜಂ ಚ ಸಚಿವಂ ಸ್ವಾಚಾರಮಾಚಾರ್ಯಕಮ್
ಮಾಹಾತ್ಮ್ಯಂ ಶ್ರುತಿಶಾಸ್ತ್ರಧೀಸ್ಮೃತಿಮತಿಂ ಸರ್ವೋನ್ನತಿಂ ಸದ್ಗತಿಮ್ |
ದೇವಬ್ರಾಹ್ಮಣಭಕ್ತಿಮಧ್ವರತಪಃ ಶ್ರದ್ಧಾಶ್ಚ ಕೋಶಸ್ಥಲಂ ವೌದುಷ್ಯಂ
ವಿಜಿತೇಂದಿಯಂ ಧನಸುಖಂ ಸಂಮಾನಮೀಢ್ಯಾದ್ದಯಾಮ್ || (ಫ-ದೀ ೦೨-೦೫)
ಜ್ಞಾನ, ಸದ್ಗುಣ, ಮಕ್ಕಳು, ಮಂತ್ರಿ, ಸದಾಚಾರ, ವಿದ್ಯಾದಾರ, ಮಹತ್ವ, ವೇದ, ಶಾಸ್ತ್ರ ಮತ್ತು ಸ್ಮೃತಿ ಇತ್ಯಾದಿಗಳ ಜ್ಞಾನ, ಸಕಲ ವಿಚಾರಗಳಲ್ಲಿ ಅಭಿವೃದ್ಧಿ, ಸದ್ಗತಿ, ದೇವ-ಬ್ರಾಹ್ಮಣರಲ್ಲಿ ಭಕ್ತಿ, ತ್ಯಾಗ, ತಪಸ್ಸು, ಶ್ರದ್ಧೆ, ಕೋಶಾಗಾರ, ವಿದ್ವತ್ತು, ಜಿತೇಂದ್ರಿಯ, ಪತಿ, ಸುಖ, ಸನ್ಮಾನ, ಪ್ರಶಂಸೆ, ದಯೆ ಮೊದಲಾದ ವಿಚಾರ ಗುರುವಿನಿಂದ ಚಿಂತಿಸಬೇಕು.
ಗೋಚಾರವನ್ನು ಚಂದ್ರರಾಶಿ ಅಥವಾ ಜನ್ಮರಾಶಿಯಿಂದ ತಿಳಿಯಬೇಕು.
ಸರ್ವೇಷು ಲಗ್ನೇಷ್ವಪಿ ಸತ್ಸು ಚಂದ್ರಲಗ್ನಂ ಪ್ರಧಾನಂ ಖಲು ಗೋಚರೇಷು |
ತಸ್ಮಾತ್ತದೃಕ್ಷಾದಪಿ ವರ್ತಮಾನಗ್ರಹೇಂದ್ರಚಾರೈಃ ಕಥಯೇತ್ಫಲಾನಿ || (ಫ-ದೀ, ಗೋಚರಫಲಾಧ್ಯಾಯ-೦೧)
ಗೋಚರದ ಫಲಗಳನ್ನು ತಿಳಿಯಲು ಎಲ್ಲ ಲಗ್ನಗಳಲ್ಲಿ ಚಂದ್ರಲಗ್ನವೇ ಪ್ರಧಾನ ಆಗಿರುತ್ತದೆ. ಆದ್ದರಿಂದ ತಾತ್ಕಾಲಿಕ ಗ್ರಹರ ಚಾರದ ಫಲಾಫಲ ತಿಳಿಯಲು ಚಂದ್ರನಿಂದ (ಜನ್ಮರಾಶಿ) ಆ ಗ್ರಹಸ್ಥಿತ ರಾಶಿಗಳನ್ನು ಗಣಿಸಬೇಕು.
ಗುರುಗ್ರಹದ ಗೋಚಾರವನ್ನು ನೋಡೋಣ –
ಸ್ವಾಯಧರ್ಮತನಯಾಸ್ತಸಂಸ್ಥಿತೋ ನಾಕನಾಯಕ ಪುರೋಹಿತಃ ಶುಭಃ |
ರಿಃಫರಂಧ್ರಖಜಲತ್ರಿಗೈರ್ಯದಾ ವಿದ್ಯತೇ ಗಗನಚಾರಿಭಿರ್ನ ಹಿ || (ಫ-ದೀ, ಗೋಚರಫಲಾಧ್ಯಾಯ-೦೭)
ಜನ್ಮರಾಶಿಯಿಂದ ಗುರುವು ಶುಭಫಲ ನೀಡುವ ಸ್ಥಾನ ಮತ್ತು ಅವುಗಳ ವೇಧರಾಶಿಗಳು 2-12, 5-4, 7-3, 9-10 ಮತ್ತು 11-8 ಆಗಿರುತ್ತವೆ.
ಜನ್ಮರಾಶಿಯಿಂದ 2,5,7,9,11 ಈ ರಾಶಿಗಳಲ್ಲಿ ಗುರುಸಂಚಾರವಿದ್ದಾಗ ಶುಭಕರವಾಗಿರುತ್ತದೆ. ಈ ಮೇಲೆ ಹೇಳಲ್ಪಟ್ಟ ರಾಶಿಗಳ ವೇಧರಾಶಿಗಳಾದ, ಕ್ರಮವಾಗಿ 12,4,3,10,8 ಈ ಸ್ಥಾನಗಳಲ್ಲಿ ಬೇರೆ ಯಾವುದೇ ಗ್ರಹ ಅಥವಾ ಗ್ರಹಗಳ ಸ್ಥಿತಿ ಇದ್ದಾಗ ಈ ಶುಭಫಲ ಇಲ್ಲವಾಗುತ್ತದೆ.
ಸಧ್ಯ ಮೇಷರಾಶಿಯಲ್ಲಿ ಚತುರ್ಗ್ರಹಯುತಿ ಇರುತ್ತದೆ. ಪ್ರಸಕ್ತ ಗುರುವಿನ ಶುಭಸ್ಥಾನ-ರಾಶಿ ಮತ್ತು ವೇಧರಾಶಿ ಫಲಾದೇಶಗಳು ಕೆಳಕಂಡಂತೆ ಇವೆ.
| ಶುಭಸ್ಥಾನ |
2 |
5 |
7 |
9 |
11 |
| ರಾಶಿ |
ಮೀನ |
ಧನು |
ತುಲಾ |
ಸಿಂಹ |
ಮಿಥುನ |
| ವೇಧ |
12 |
4 |
3 |
10 |
8 |
| ರಾಶಿ |
ವೃಶಭ |
ಮಕರ |
ಕುಂಭ |
ಕರ್ಕ |
ಕನ್ಯಾ |
| ವೇಧಕಾರಕ |
- |
- |
- |
- |
ಶನಿ |
ಮಿಥುನಕ್ಕೆ ಗುರುಗೋಚಾರವು ಶನಿಯಿಂದಾಗಿ ವೇಧಕಾರಕವಾಗಿರುವುದರಿಂದ ಅಷ್ಟು ಅನುಕೂಲಕರವಲ್ಲ. ಉಳಿದಂತೆ ದ್ವಾದಶ ರಾಶಿಗಳ ಗುರುಗೋಚಾರ ಫಲಾದೇಶ ಈ ಕೆಳಕಂಡಂತೆ ಇದೆ.
ಜನ್ಮರಾಶಿಯಿಂದ ೪-೮-೧೨ನೇಯವನಾಗಿ ಬರುವ ಗುರು (ಮಕರ-ಕನ್ಯಾ-ವೃಷಭ ರಾಶಿಯವರಿಗೆ) – ಆರೋಗ್ಯ ಹಾಗು ಕೌಟುಂಬಿಕ ದೃಷ್ಟಿಯಿಂದ ಅಶುಭದಾಯಕನು ಆಗುತ್ತಾನೆ. ಚತುರ್ಥನಾಗಿ ಗೋಚರಿಸುವ ಗುರುವಿನಿಂದ (ಮಕರ) ಬಂಧು ಬಾಂಧವರಿಂದ ತೊಂದರೆ, ಪೀಡೆ, ಆರ್ಥಿಕ ಅನಾನುಕೂಲತೆ, ದಾರಿದ್ರ್ಯ, ಮತ್ತು ಪ್ರಾಣಿಗಳಿಂದ ಪೀಡೆಯಾಗುತ್ತದೆ. ಅಷ್ಟಮ ಗುರುವಿನಿಂದ (ಕನ್ಯಾ) ಕೌಟುಂಬಿಕ ವಿರಸ, ಗ್ರಹಕಲಹ, ಅನಾವಶ್ಯಕ ಸಂಚಾರ, ಧನನಾಷ ಉಂಟಾಗುತ್ತದೆ. ದ್ವಾದಶ ಗುರುವಿನಿಂದ (ವೃಷಭ) ಆರೋಗ್ಯದ ತೊಂದರೆಗಳು, ಔದ್ಯೋಗಿಕವಾಗಿ ಅಶುಭವು, ಧನ-ಸಂಪತ್ತುಗಳ ಹೇತುವಿನಿಂದ ದುಃಖ, ಭಯ, ಚಿಂತೆ ಇತ್ಯಾದಿ ಫಲ.
ಜನ್ಮರಾಶಿಯಿಂದ 1-7-9ನೇಯ ಗುರು (ಮೇಷ, ತುಲಾ, ಸಿಂಹ) ದೂರದ ಪ್ರವಾಸವನ್ನೂ, ತೀರ್ಥಯಾತ್ರಾಲಾಭ, ದೈವಕೃಪೆ, ಉದ್ಯೋಗ, ಆರ್ಥಿಕ ಹಾಗು ವಾಸಸ್ಥಳಗಳಲ್ಲಿ ಆಕಸ್ಮಿಲ ಬದಲಾವಣೆಯನ್ನು ಕೊಡುತ್ತಾನೆ. ಮೇಷ – ದೂರಪ್ರವಾಸ, ನಿರಂತರ ಸಂಚಾರ, ಧನವ್ಯಯ, ಶತ್ರುಪೀಡೆ, ಇತ್ಯಾದಿ. ತುಲಾ – ಸತ್ಕರ್ಮ, ಶುಭಸಮಾರಂಭ, ಯಾತ್ರಾಲಾಭ, ಸ್ತ್ರೀಸುಖ, ಪುತ್ರಸಂತಾನಾದಿ ಫಲಗಳು. ಸಿಂಹ – ಸಕಲಸೌಭಾಗ್ಯಪ್ರಾಪ್ತಿ, ಸ್ಥಾನ-ಮಾನ, ವೃದ್ಧಿ ಇತ್ಯಾದಿ ಫಲ.
ಗೋಚರಿಯಿಂದ ಶುಭಸ್ಥಾನಗಳಾದ 2-5-11ನೇ ರಾಶಿಗಳಾದ ಮೀನ, ಧನು, ಮಿಥುನಗಳ ಫಲಾದೇಶ ಹೀಗೆ ಇದೆ. ಮೀನ – ಧನ ಸಂಪದಾ ಪ್ರಾಪ್ತಿ, ಕುಟುಂಬ ಸುಖ, ಕಾರ್ಯಸಾಧನೆ. ಧನು – ಪುತ್ರಸಂತಾನಪ್ರಾಪ್ತಿ, ಸಜ್ಜನ ಸಹಯೋಗ, ಗುರುಕೃಪೆ, ಸರಕಾರದಿಂದ ಅನುಕೂಲ. ಮಿಥುನ – ಪುತ್ರಪ್ರಾಪ್ತಿ, ಸ್ಥಾನಮಾನ ಪ್ರಾಪ್ತಿ, ಮಿಥುನಕ್ಕೆ ವೇಧವಿರುವದರಿಂದ ಶುಭಫಲದಲ್ಲಿ ಅಲ್ಪ ವ್ಯತ್ಯಾಸವು ಇರುತ್ತದೆ.
ಗೋಚರಿಯಿಂದ 3-6-10ನೇ ರಾಶಿಗಳಾದ ಕುಂಭ, ವೃಶ್ಚಿಕ, ಕರ್ಕ ರಾಶಿಗಳ ಫಲ. ಕುಂಭರಾಶಿಗೆ ಸ್ಥಾನನಾಶ, ರೋಗಪೀಡೆ, ಇಷ್ಟಜನರ ವಿಯೋಗ, ಕಾರ್ಯಗಳಲ್ಲಿ ವಿಘ್ನ ಇತ್ಯಾದಿ ಫಲಗಳು. ವೃಶ್ಚಿಕ ರಾಶಿಗೆ ಶತ್ರುಪೀಡೆ, ಸಹೋದರ, ಮಿತೃರಿಂದ ಹಾನಿ, ರೋಗಪೀಡೆ. ಕರ್ಕರಾಶಿಗೆ ಧನಹಾನಿ, ಸ್ಥಾನಚ್ಯುತಿ, ಮಕ್ಕಳಿಗೆ ಕಷ್ಟ ಇತ್ಯಾದಿ ಫಲ.
ಫಲಜ್ಯೋತಿಷ್ಯದಲ್ಲಿ ಫಲನಿರ್ದೇಶಕ್ಕಾಗಿ ಹೇಳಿರುವ ಅನೇಕ ಮಾರ್ಗಗಳಲ್ಲಿ ಗೋಚಾರವೂ ಒಂದು ಮಾರ್ಗ ಮಾತ್ರ. ಈ ಮೇಲ್ಕಂಡ ಫಲಗಳು ಅತೀ ನಿಖರ ಎಂದು ಹೇಳುವುದು ಅಸಾಧ್ಯ. ಗೋಚಾರಕ್ಕಿಂತಲೂ ಜನ್ಮಕುಂಡಲಿಯಲ್ಲಿ ಗ್ರಹಗಳ ಯೋಗ, ಬಲಾಬಲ, ಸ್ಥಾನ, ದೋಷಗಳನ್ನು ಪರಿಶಿಲಿಸಿ ದಶಾಪದ್ಧತಿಗೆ ಅನುಸಾರವಾಗಿ ಹೇಳುವ ಫಲಾದೇಶ ಶ್ರೇಷ್ಟವಾದದ್ದು. ಅಷ್ಟಕವರ್ಗ, ಪ್ರಶ್ನೆಗಳಿಂದಲೂ ಸರಿಯಾದ ಮಾರ್ಗದರ್ಶನ ಪಡೆಯಬಹುದು.
ಅಷ್ಟು ನಿಖರವೂ, ಸೂಕ್ಷ್ಮ ಮತ್ತು ವ್ಯಕ್ತಿನಿಷ್ಟ ಅಲ್ಲದ ಗೋಚಾರಪದ್ಧತಿಯ ಫಲಾದೇಶವನ್ನು ಮೇಲೆ ಹೇಳಿರುವ ವಿವಿಧ ಮಾರ್ಗಗಳಿಂದ ಪರಾಮರ್ಶಿಸಿ ಗ್ರಹಣ ಮಾಡುವುದು ಯೋಗ್ಯ ಎಂದು ನನ್ನ ವೈಯಕ್ತಿಕ ಅನಿಭವ ಮತ್ತು ಸಲಹೆ. ಪತ್ರಿಕೆಗಳನ್ನು ಓದಿ, ಯಾವುದೇ ಅನಭ್ಯಾಸೀ ಜ್ಯೋತಿಷಿಯ ಮಾತನ್ನು ಕೇಳಿ ಅಥವಾ ಟಿವಿಯಲ್ಲಿ ಕಂಡದ್ದನ್ನು ನಂಬಿ ನಿರ್ಧಾರಗಳನ್ನು ಸರ್ವಥಾ ತೆಗೆದುಕೊಳ್ಳಬಾರದು. ಗುರುಹಿರಿಯರ ಸೇವೆ ಮತ್ತು ಕುಲದೇವತೆಗಳ ಆರಾಧನೆ ಎಲ್ಲ ರೀತಿಯ ಕಷ್ಟಗಳನ್ನು ನಿವಾರಿಸಲು ಶ್ರೇಷ್ಟ ಉಪಾಯ, ತಾಳ್ಮೆ ಮತ್ತು ವಿಚಾರವಂತರಾಗಿ ಬದುಕುವುದು ಅವಶ್ಯಕ.
ಈ ಲೇಖನ ಸ್ವಲ್ಪ ವಿಳಂಬವಾಗಿ ಪ್ರಕಟಿಸಿದ್ದಕ್ಕೆ ಕ್ಷಮೆಯಿರಲಿ, ಮುಂದಿನ ಲೇಖನದಲ್ಲಿ ಗುರುಗ್ರಹ ಶಾಂತಿ ಉಪಾಯಗಳನ್ನು ನೋಡೋಣ.
ಶ್ರೀಶಾರ್ಪಣಮ್ .
Good information sir…
Please continue…
Guru
Knowledgeable information for everyone for their future.
Better late than never. Information is very useful. Thanks a lot for useful information.
We will try to follow it to the maximum extent
Thank you
Girija