ನವಗ್ರಹಗಳಲ್ಲಿ ಗುರು ಮತ್ತು ಶನಿಗ್ರಹರು ದೀರ್ಘಕಾಲದವರೆಗೆ ಪ್ರಭಾವವನ್ನುಂಟು ಮಾಡುವ ಗ್ರಹಗಳಾಗಿದ್ದಾರೆ. ಗೋಚಾರದಲ್ಲಿ ಈ ಗ್ರಹಗಳ ಸಂಚಾರವನ್ನು ವಿಶೇಷವಾಗಿ ಅಭ್ಯಸಿಸಲಾಗುತ್ತದೆ. ಈ ನೊವೆಂಬರ್ ೧೫ ರಂದು ಶನಿಗ್ರಹವು ತುಲಾರಾಶಿಯಲ್ಲಿ ಪ್ರವೇಶಮಾಡುತ್ತದೆ. ಶಾಸ್ತ್ರೀಯವಾಗಿ ಈ ವಿದ್ಯಮಾನವು ಪ್ರಬಲವಾದ ಬದಲಾವಣೆಗಳನ್ನು ಉಂಟುಮಾಡಲಿದೆ. ಈ ಖಗೋಳಿಯ ಘಟನೇಯ ಜ್ಯೋತಿಃಶಾಸ್ತ್ರೀಯ ಪ್ರಭಾವ ಮತ್ತು ಪರಿಣಾಮಗಳನ್ನು ಚರ್ಚಿಸಲು ನಾನು ಕೆಲವು ಲೇಖನಗಳನ್ನು ಭಾವಿಕರಲ್ಲಿ ಸಾದರಪಡಿಸುತ್ತಿದ್ದೇನೆ. ಪ್ರಸಕ್ತ ಲೇಖನದಲ್ಲಿ ಶನಿಗ್ರಹ ರಾಶಿಪ್ರವೇಶ, ದ್ವಾದಶ ರಾಶಿಗಳಿಗೆ ಅದರಿಂದಾಗುವ ಪರಿಣಾಮ ಮತ್ತು ಗೋಚರಿಯ ಪ್ರಭಾವಗಳನ್ನು ಸ್ಥೂಲವಾಗಿ ಪರಿಚಯ ಮಾಡಿಕೊಳ್ಳೋಣ. ಮುಂದಿನ ಲೇಖನಗಳು ಶನಿಗ್ರಹದ ಪರಿಚಯ, ಅವನ ವಿಶಿಷ್ಟ ಕಾಲಪ್ರಭಾವಗಳಾದ ದ್ವಾದಶ (ಸಾಡೇಸಾತೀ ಅಥವಾ ಏಳರಾಟ), ಅಷ್ಟಮ ಮತ್ತು ಪಂಚಮ ಸ್ಥಾನಗತ ಫಲಗಳನ್ನು ಮತ್ತು ಗ್ರಹಶಾಂತೀ ಉಪಾಯಗಳನ್ನು ತಿಳಿದುಕೊಳ್ಳೋಣ.
ಶನಿಯ ತುಲಾರಾಶಿ ಪ್ರವೇಶ
ನೋವೆಂಬರ್ 15, ಕಾರ್ತಿಕ ಕೃಷ್ಣಪಕ್ಷ ಚತುರ್ಥೀ, ಮಂಗಳವಾರ ಮುಂಜಾನೆ 10-10ಕ್ಕೆ ಆಗಲಿದೆ. ಇದರ ಪುಣ್ಯಕಾಲವನ್ನು ಪಂಚಾಂಗಕಾರರು ಬೆಳಿಗ್ಗೆ 07-16 ರಿಂದ ಮಧ್ಯಾಹ್ನ 01-04 ಪರ್ಯಂತವೆಂದು ನಿರ್ಧರಿಸಿರುತ್ತಾರೆ. ಈ ಪರ್ವಕಾಲದಲ್ಲಿ ವಿಶೇಷ ಜಪ, ಪೂಜಾ, ಹೋಮಾದಿ ಕರ್ಮಗಳನ್ನು ಶ್ರೀಶನಿದೇವನ ಪ್ರೀತ್ಯರ್ಥ ನಡೆಸಬೇಕು.
ಶನಿಗ್ರಹ (ಲಘುಪರಿಚಯ) -
ಮಕರ, ಕುಂಭರಾಶಿಗಳು ಸ್ವಕ್ಷೇತ್ರ (ಸ್ವರಾಶಿ), ತುಲಾ ಉಚ್ಚಕ್ಷೇತ್ರ, ಮೇಷ ನೀಚಕ್ಷೇತ್ರ, ಕುಂಭ ಮೂಲತ್ರಿಕೋಣ.
ಸಂಪೂರ್ಣ ದೃಷ್ಟಿ 3-7-10ನೇ ಭಾವಗಳು.
ಮಿತ್ರತ್ವ – ಬುಧ, ರಾಹು, ಶುಕ್ರ
ಸಮ – ಗುರು
ಶತ್ರುತ್ವ – ರವಿ, ಚಂದ್ರ, ಕುಜ (ಮಂಗಳ)
ಶನಿಯ ಕಾರಕತ್ವ -
ಆಯುಷ್ಯಂ ಜೀವನೋಪಾಯಂ ಮರಣಂ ಚ ಶನೈಶ್ಚರ |
ಆಯುಷ್ಯ, ಜೀವನೋಪಾಯ ಕರ್ಮಗಳು, ಮರಣ ಇತ್ಯಾದಿಗಳು ಶನಿಯ ಕಾರಕತ್ವಗಳಾಗಿವೆ.
ಫಲದೀಪಿಕಾದಲ್ಲಿ – ಆಯುಷ್ಯ, ಮರಣ, ಭಯ, ಪತನ, ಭ್ರಷ್ಟತೆ, ದುಃಖ, ಅವಮಾನ, ರೋಗ, ದಾರಿದ್ರ್ಯ, ಸೇವಕರು, ಅಪವಾದ, ಪಾಪಕೃತ್ಯ, ಅಶುಚಿ, ಸೂತಕಾದಿಗಳು, ನಿಂದೆ, ಆಪತ್ತು, ಸ್ಥಿರತ್ವ, ನೀಚ ಸಂಪರ್ಕ, ಕೋಣ, ಆಲಸ್ಯ, ಸಾಲ, ಕಬ್ಬಿಣದ ವಸ್ತುಗಳು, ಸೇವಕರು, ಕೃಷಿ ಉತ್ಪನ್ನಗಳು, ಕೃಷಿ ಉಪಕರಣಗಳು, ಕಾರಾಗೃಹ, ಬಂಧನ ಇವುಗಳೆಲ್ಲವನ್ನು ಶನಿಯಿಂದ ಚಿಂತಿಸಬೇಕು ಎಂದು ಹೇಳಲಾಗಿದೆ.
ಇನ್ನೂ ಅನೇಕ ವಿಷಯಗಳಿಗೆ ಶನಿಯು ಕಾರಕನಾಗಿರುತ್ತಾನೆ, ಮುಂಬರುವ ಶನಿಯ ಕುರಿತ ಲೇಖನಗಳಲ್ಲಿ ಅವುಗಳೆಲ್ಲವನ್ನು ತಿಳಿದುಕೊಳ್ಳೋಣ.
ಶನಿಚಾರ
ಶನಿಯು ಪೂರ್ಣ ರಾಶಿಚಕ್ರವನ್ನು ಒಂದು ಆವರ್ತನ ಸುತ್ತಲು ತೆಗೆದುಕೊಳ್ಳುವ ಕಾಲ 30 ವರ್ಷಗಳು, ಆದ್ದರಿಂದ ಪ್ರತಿಯೊಂದು ರಾಶಿಯಲ್ಲಿ ಅವನ ಸಂಚಾರ ಸುಮಾರು 2ವರ್ಷ 6ತಿಂಗಳುಗಳಷ್ಟಾಗುತ್ತವೆ. ಗ್ರಹಗತಿಗಳಲ್ಲುಂಟಾಗುವ ವಕ್ರೀ, ಸ್ತಂಭೀ ಗತಿವಿಶೇಷವಾಗಿ ಈ ಕಾಲಾವಧಿ ಅಲ್ಪ-ಸ್ವಲ್ಪ ವ್ಯತ್ಯಾಸವಾಗುತ್ತದೆ. ಇಷ್ಟು ನಿಧಾನವಾದ ಗತಿಯನ್ನು ಹೊಂದಿರುವ ಕಾರಣದಿಂದಲೇ ಶನಿ ಮಂದ, ಶನೈಶ್ಚರ (ನಿಧಾನವಾಗಿ ಚಲಿಸುವವನು) ಎಂದು ಶಾಸ್ತ್ರಗಳಲ್ಲಿ ಸಂಭೋಧಿಸಲ್ಪಟ್ಟಿದ್ದಾನೆ.
ಜನ್ಮರಾಶಿಯಿಂದ 3-6-11 ನೇಯ ರಾಶಿಗಳಲ್ಲಿ ಶನಿಸಂಚಾರ ಶುಭಪ್ರದವಾಗಿರುತ್ತದೆ. ಉಳಿದ ಎಲ್ಲ ರಾಶಿಗಳಲ್ಲಿ ಪೀಡಾಪ್ರದವಾಗಿರುತ್ತದೆ. 5-9-12 ನೇಯ ರಾಶಿಗಳು ವೇಧಸ್ಥಾನಗಳಾಗಿದ್ದು ರವಿಯನ್ನು ಹೊರತುಪಡಿಸಿ ಈ ರಾಶಿಗಳಲ್ಲಿ ಇತರ ಗ್ರಹಗಳ ಸಂಚಾರವಾದಾಗ ಫಲವ್ಯತ್ಯಾಸ ಅನುಭವಕ್ಕೆ ಬರುತ್ತದೆ. ಶನಿಯು ಬಹಳ ಮಂದಗತಿಯ ಗ್ರಹನಾಗಿದ್ದು ಈ ವ್ಯತ್ಯಾಸಗಳು ಅಲ್ಪಕಾಲವಷ್ಟೇ ಇರುತ್ತವೆ. ಪಂಚಮ, ಅಷ್ಟಮ ಮತ್ತು ದ್ವಾದಶಸ್ಥಾನಗತ ರಾಶಿಗಳಿಗೆ ಶನಿಬಾಧೆ ಸ್ವಲ್ಪ ಹೆಚ್ಚು ಅನುಭವಕ್ಕೆ ಬರುತ್ತದೆ.
ಸಾಡೇಸಾತಿ -
ಜನ್ಮರಾಶಿ ಅಥವಾ ಚಂದ್ರರಾಶಿಗೆ ಗೋಚರಿ ದ್ವಾದಶಸ್ಥನಾಗಿ ಶನಿಯು ಸಂಚರಿಸುತ್ತಿರಲು ಉಂಟಾಗುವ ಗೋಚರಯೋಗವನ್ನು ಸಾಡೇಸಾತಿ ಶನಿಬಾಧೆ, ಏಳರಾಟದ ಶನಿ ಇತ್ಯಾದಿಯಾಗಿ ಕರೆಯುತ್ತಾರೆ. ಈ ಯೋಗದ ಕಾಲಾವಧಿಯು ಸುಮಾರು ಏಳುವರೆ ವರ್ಷಗಳಷ್ಟು ಇರುತ್ತದೆ. ಜನ್ಮರಾಶಿಯ ಹಿಂದಿನ ರಾಶಿ, ಜನ್ಮರಾಶಿ, ಜನ್ಮರಾಶಿಯ ಮುಂದಿನ ರಾಶಿ ಈ ರೀತಿ ಪ್ರತ್ಯೇಕ ಪ್ರತ್ಯೇಕ ಎರಡುವರೆ ವರ್ಷಗಳ, ಒಟ್ಟು ಏಳುವರೆ ವರ್ಷಗಳಷ್ಟು ಅವಧಿ. (ಶನಿಯ ತುಲಾರಾಶಿ ಪ್ರವೇಶಾರಂಭದಿಂದ ವೃಶ್ಚಿಕರಾಶಿಯವರಿಗೆ ಸಾಡೇಸಾತಿ ಬಾಧೆ ಶುರುವಾಗಲಿದೆ, ಕನ್ಯಾ ಮತ್ತು ತುಲಾರಾಶಿಯವರಿಗೆ ಈಗಾಗಲೆ ಸಾಡೇಸಾತೀ ನಡೆಯುತ್ತಿರುತ್ತಿದೆ. ಇದರ ಕುರಿತು ಒಂದು ಲೇಖನವನ್ನು ಶೀಘ್ರದಲ್ಲಿಯೇ ಪ್ರಕಟಿಸುತ್ತೇನೆ.)
ಮೇಷಾದಿ ದ್ವಾದಶ ರಾಶಿಗಳ ಮೇಲೆ ತುಲಾರಾಶಿಸ್ಥಿತ ಶನಿ ಗೋಚಾರ ಪ್ರಭಾವ
ತುಲಾರಾಶಿಯ ಶನಿಯು ಕ್ರಮವಾಗಿ ತುಲಾರಾಶಿಗೆ ಒಂದನೇಯವನು, ಕನ್ಯಾ ಎರಡು, ಸಿಂಹ ಮೂರು, ಕರ್ಕ ನಾಲ್ಕು, ಮಿಥುನ ಐದು, ವೃಷಭ ಆರು, ಮೇಷ ಏಳು, ಮೀನ ಎಂಟು, ಕುಂಭ ಒಂಭತ್ತು, ಮಕರ ಹತ್ತು, ಧನು ಹನ್ನೊಂದು, ವೃಶ್ಚಿಕರಾಶಿಗೆ ಹನ್ನೇರಡನೇಯವನಾಗಿ ಸಂಚಾರ ಮಾಡುತ್ತಾನೆ.
ಮೊದಲು ಶನಿಯು ಪ್ರವೇಶಿಸಲಿರುವ ತುಲಾರಾಶಿಯ ಫಲಿತವನ್ನು ನೋಡೋಣ. ತುಲಾರಾಶಿಯು ಶನಿಯ ಉಚ್ಚರಾಶಿಯಾಗಿರುತ್ತದೆ. ತುಲಾರಾಶಿಯ ಅಧಿಪತಿ ಶುಕ್ರನಾಗಿದ್ದು ಅವನು ಶನಿಯ ಮಿತ್ರನಾಗಿರುತ್ತಾನೆ. ಆದರೂ ಒಂದನೇಯ ಸ್ಥಾನದ ಶನಿಯಾದ್ದರಿಂದ ಅಶುಭ ಫಲಗಳನ್ನು ಕೊಡುತ್ತಾನೆ, ಅಲ್ಲದೇ ಈ ರಾಶಿಜಾತರಿಗೆ ಸಾಡೇಸಾತಿಯ ಎರಡನೇಯ ಅವಧಿಯು ನಡೆದಿರುತ್ತದೆ. ರೋಗ, ಅನಾರೋಗ್ಯ, ಮರಣಸೂಚನೆ, ಅಗ್ನಿಭಯ, ಪರದೇಶದಲ್ಲಿ ದಾರಿದ್ರ್ಯ ಗ್ರಹನಾಶ, ಸ್ವಜನ ವಿರಸ ಕಲಹಾದಿಗಳು ಫಲಾದೇಶ. (ಶನಿಯ ಉಚ್ಚರಾಶಿಯಾದುದರಿಂದ ಶಾಂತಿಕರ್ಮಗಳನ್ನು ಮಾಡಿಸಿದಲ್ಲಿ ಸುಖಪ್ರಾಪ್ತಿ.)
ಶನಿಯು ಎರಡನೇಯವನಾಗಿ ಬರುವ ಕನ್ಯಾರಾಶಿಯ ಗೋಚಾರ ಫಲಗಳು – ಧನನಾಶ, ಸಂತಾನಹಾನಿ (ಸಂತಾನಹಾನಿ ಎಂದರೆ ಸಂತತಿಯ ನಾಶವೆಂದು ಅರ್ಥವಾದರೂ, ಮಕ್ಕಳು ದುರ್ಮಾರ್ಗಿಗಳಾಗುವುದು, ವ್ಯಸನಿಗಳಾಗುವುದು, ಮಾತಾಪಿತೃಗಳಿಗೆ ಮಕ್ಕಳಿಂದ ಅವಮಾನ ಎಂಬ ಅರ್ಥವನ್ನೂ ಗ್ರಹಿಸಬಹುದು.)
ಶನಿಗೋಚರೀ ತೃತೀಯ ಸಿಂಹರಾಶಿಯ ಫಲಾದೇಶ – ಸ್ಥಾನಪ್ರಾಪ್ತಿ (ಪ್ರಮೋಷನ್, ಸಂಬಳ ಬಡ್ತಿ), ಸೇವಕವರ್ಗದ ಪ್ರಾಪ್ತಿ ಅಥವಾ ಅವರಿಂದ ಲಾಭ, ಧನಲಾಭ, ಪರಿವಾರವರ್ಗದಿಂದ ಸುಖ, ಪಶುಲಾಭ, ಸುಗೃಹವಾಸ, ಬಹುಕಾಲದ ರೋಗನಿವೃತ್ತಿ, ಧೈರ್ಯಲಾಭ ಇತ್ಯಾದಿ ಶುಭಫಲಾದೇಶ.
ಗೋಚರೀ ಚತುರ್ಥರಾಶಿಯಾದ ಕರ್ಕರಾಶಿಯ ಫಲಾದೇಶ – ಧನನಾಶ, ಪತ್ನಿವಿಯೋಗ ಅಥವಾ ಕಲಹ, ಬಂಧು-ಬಾಂಧವರ ಹಾಗು ಮಿತ್ರವರ್ಗದ ವಿಯೋಗ, ದುಷ್ಟಕರ್ಮಗಳಲ್ಲಿ ಮನಸ್ಸಿನ ಆಕರ್ಷಣೆ.
ಮಿಥುನರಾಶಿಯವರಿಗೆ ಪಂಚಮ ಶನಿಗೋಚಾರ ಫಲ – ಧನಸಂಪತ್ತುಗಳ ನಾಶ, ಸಂತಾನ ವಿಯೋಗ (ಮಕ್ಕಳಿಂದ ದೂರರಾಗುವುದು), ಮಾನಸಿಕ ಪೀಡೆ, ಅನಾವಶ್ಯಕ ಕಲಹ.
ವೃಷಭರಾಶಿಯವರಿಗೆ ಆರನೇಯ ಶನಿಯ ಫಲಾದೇಶ – ಸುಖಪ್ರಾಪ್ತಿ, ಶತ್ರುಪೀಡಾನಿವೃತ್ತಿ, ರೋಗನಿವೃತ್ತಿ, ಸ್ತ್ರೀಸುಖ ಲಾಭ ಇತ್ಯಾದಿ ಶುಭಫಲ.
ಮೇಷರಾಶಿಯವರಿಗೆ ಸಪ್ತಮ ಶನಿಯ ಫಲಾದೇಶ – ದುಃಖಕರ ಹಾನಿಕರ ಸಂಚಾರ, ಮಾರ್ಗದಲ್ಲಿ ಕಷ್ಟ, ಪತ್ನಿಗೆ ಅನಾರೋಗ್ಯ ಸಂಭವ.
ಮೀನರಾಶಿಯವರಿಗೆ ಅಷ್ಟಮ ಶನಿಚಾರದ ಫಲ – ಸಂತಾನಹಾನಿ, ಸಂಪತ್ತಿನ ನಾಶ, ಸ್ತ್ರೀವಿಯೋಗ, ದುರಾಚಾರಗಳಲ್ಲಿ ಆಸಕ್ತಿ.
ಕುಂಭರಾಶಿಯವರಿಗೆ ನಮಮ ಶನಿಗೋಚಾರ ಫಲ – ಧಾರ್ಮಿಕ ಕಾರ್ಯಗಳಲ್ಲಿ ವಿಘ್ನ, ಪಿತೃಸಮಾನ ವ್ಯಕ್ತಿಯ ವಿಯೋಗ ಅಥವಾ ಮರಣ, ಸ್ವಜನ ವೈರ, ಹೃದಯರೋಗ, ಬಂಧನ, ಸತ್ಕರ್ಮಹೀನ, ದಾರಿದ್ರ್ಯಾದಿ ದುಃಖಗಳು.
ಶನಿಗೋಚಾರ ದಶಮರಾಶಿಯಾದ ಮಕರಕ್ಕೆ ಫಲಗಳು – ರೋಗಪೀಡಾ, ದುಷ್ಕರ್ಮಗಳಲ್ಲಿ ಪ್ರವೃತ್ತಿ, ಮಾನಭಂಗ, ಧನಹಾನಿ, ವಿದ್ಯಾಕೀರ್ತಿನಾಶ.
ಹನ್ನೊಂದನೇಯವನಾಗಿ ಶನಿಬರುವ ಧನುರಾಶಿಯವರಿಗೆ ಫಲಾದೇಶ – ಅನೇಕ ಸುಖಪ್ರಾಪ್ತಿ, ವೈಭವ, ಕೀರ್ತಿ-ಮಾನ-ಸಮ್ಮಾನ, ಧನಲಾಭ.
ವೃಶ್ಚಿಕರಾಶಿಯವರಿಗೆ ದ್ವಾದಶಸ್ಥಾನಸ್ಥ ಶನಿಯ ಫಲಾದೇಶ – ಕೈಗೊಂಡ ಕಾರ್ಯಗಳಲ್ಲಿ ಅಸಫಲತೆ, ಫಲಹೀನ ಕಾರ್ಯಗಳು, ಸ್ಥಾನಭೃಷ್ಟರಾಗುವುದು, ಶತ್ರುಗಳಿಂದ ಧನಾಪಹಾರ, ಪತ್ನಿ-ಪುತ್ರರಿಗೆ ಅನಾರೋಗ್ಯ ಇತ್ಯಾದಿ.
ಕನ್ಯಾ, ತುಲಾ ಮತ್ತು ವೃಶ್ಚಿಕರಾಶಿಯವರಿಗೆ ಏಳರಾಟ ಶನಿಯ ಪೀಡೆಯಿರುತ್ತದೆ.
ಈ ಮೇಲೆ ಹೇಳಲ್ಪಟ್ಟ ಫಲಾದೇಶಗಳು ಅತ್ಯಂತ ನಿಖರ ಎಂದು ಹೇಳುವುದು ಅಸಾಧ್ಯ. ಜನ್ಮ ಕುಂಡಲಿಯಲ್ಲಿ (ಜಾತಕದಲ್ಲಿ) ಶನಿಯ ಬಲಾಬಲವನ್ನು ಗೋಚರಿಯನ್ನು ನೋಡುವಾಗ ಅತ್ಯಂತ ಪರಿಶೀಲನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಜಾತಕದಲ್ಲಿ ಒಂದು ವೇಳೆ ಶನಿಯು ಬಲಾಢ್ಯನೂ, ಶುಭನೂ ಆಗಿದ್ದರೆ ಗೋಚಾರ ಫಲಗಳು ಅಶುಭವಾದರೂ ಪ್ರಮಾಣದಲ್ಲಿ ಕಡಿಮೆಯಾಗುತ್ತವೆ. ಅಂತೇಯೆ ಇತರ ಗ್ರಹಗಳೂ ಹಾಗು ಅವರ ಜೊತೆ ಶನಿಯ ಸಂಬಂಧಗಳೂ ತುಂಬಾ ಮಹತ್ವಪೂರ್ಣವಾಗಿರುತ್ತವೆ.
ಬೊಗಳೆ ಜ್ಯೋತಿಷ್ಯಿಗಳ ಹಾಗು ಅರ್ಧಪಂಡಿತರ ಮಾತು ಕೇಳಿ, ಟೀವಿ, ಪತ್ರಿಕೆಗಳನ್ನು ನೋಡಿ ಇತ್ತೀಚಿಗೆ ಜನ ಅತಿಯಾಗಿ ಗಾಬರಿ, ಚಿಂತೆಗೆ ಒಳಗಾಗುತ್ತಿರುವುದು ದುರಂತ ಸ್ಥಿತಿ. ಎಂತಹದೇ ಸಮಸ್ಯೆಯಿದ್ದರೂ ದೇವತಾಸೇವೆಯಿಂದ ನಿವಾರಣೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಸಮಚಿತ್ತ, ತಾಳ್ಮೆಗಳು ಅತ್ಯವಶ್ಯಕ. ಶ್ರೀಶನಿ ಮಹಾದೇವನು ನಮ್ಮ ಕರ್ಮಗಳನ್ನು ನಿವಾರಣೆ ಮಾಡಿಸುವುದರಲ್ಲಿ ಮಹತ್ತರ ಕಾರ್ಯವನ್ನು ಮಾಡುತ್ತಾನೆ.ಸಂಚಿತವನ್ನು ಭೋಗಿಸಿರಿ ಮತ್ತು ಪಾಪಗಳನ್ನು ಕಳೆದುಕೊಳ್ಳಿರಿ ಇದು ಅವನ ಸೂತ್ರ. ಆದ್ದರಿಂದ ಅವನ ದಯೆ ನಮಗೆ ಅತ್ಯವಶ್ಯಕ. ನಮ್ಮ ಸಮಸ್ತ ದುಷ್ಕರ್ಮಗಳನ್ನು ದುಃಖ, ಕಷ್ಟಗಳನ್ನು ಕೊಡುವುದರ ಮೂಲಕ ನಾಶ ಮಾಡಿಸುತ್ತಾನೆ. ಅಂತೆಯೇ ಸನ್ಮಾರ್ಗಕ್ಕೆ ಪ್ರೇರೇಪಿಸುತ್ತಾನೆ, ಈ ವಿಲಕ್ಷಣ ಸ್ವಭಾವವು ಅವನಲ್ಲಿ ಇರುವುದರಿಂದ ಅವನನ್ನು ಗ್ರಹರಾಜನೆಂದು ಕರೆಯಲಾಗಿದೆ.
ಶನೇ ದಿನಮಣೇ ಸೂನೋಹ್ಯನೇಕ ಗುಣಸನ್ಮಣೇ |
ಅರಿಷ್ಟಂ ಹರ ಮೇಽಭೀಷ್ಟಂ ಕುರು ಮಾ ಕುರುಸಂಕಟಮ್ || (ಶ್ರೀವಾದಿರಾಜರು)
ಒಳ್ಳೆಯ ಜ್ಯೋತಿಷ್ಯ ಪಂಡಿತರ ಸಲಹೆ ತೆಗೆದುಕೊಂಡು ಶಾಂತಿಕರ್ಮಗಳು, ದಾನಾದಿ, ತೀರ್ಥಸ್ನಾನಾದಿಗಳನ್ನು ಮಾಡಿಕೊಂಡು ಆ ಶನೈಶ್ಚರನ ಅನುಗ್ರಹವನ್ನು ಪಡೆಯಬಹುದು.
|| ಇತಿ ಶ್ರೀಶಾರ್ಪಣಮಸ್ತು ||
What is the remedy mantras for Mesha, Mithun and Kanya ?
Remedies will be posted in next posts.
Very good details of Sade Sati to the reader and suggestion for this to faith on Graha Raj (Shani Dev) and pooja to him and discharge your karma.