ಶನೈಶ್ಚರನ ಬಗ್ಗೆ ಭಯ ಮತ್ತು ಭಕ್ತಿಗಳಿಗೆ ಅತ್ಯಂತ ಪ್ರಮುಖ ಕಾರಣ ಸಾಡೇಸಾತಿ. ಪ್ರತಿಯೊಬ್ಬರು ಈ ಕಾಲಖಂಡದ ಪ್ರಭಾವ ಮತ್ತು ಪರಿಣಾಮಗಳನ್ನು ಅನುಭವಿಸದೆ ಇರದಿರಲು ಅಸಾಧ್ಯ. ಸಮಸ್ತ ಗ್ರಹಮಂಡಲದಲ್ಲಿ ಶನಿಯ ಗತಿ ಅತ್ಯಂತ ಮಂದವಾಗಿರುವುದು ಸರ್ವವಿದಿತ. ಪ್ರತಿ ರಾಶಿಯಲ್ಲಿ ಶನಿಯ ವಾಸ್ತವ್ಯ ಎರಡೂವರೆ ವರ್ಷಗಳಷ್ಟಾಗಿರುತ್ತದೆ. ಪೂರ್ಣ ರಾಶಿಚಕ್ರದ ಒಂದು ಪರಿಕ್ರಮೆಗೆ ತೆಗೆದುಕೊಳ್ಳುವ ಕಾಲಾವಕಾಶ ಮೂವತ್ತು ವರ್ಷಗಳು. ಆದ್ದರಿಂದ ಯಾವುದೇ ವ್ಯಕ್ತಿಯ ಪೂರ್ಣ ಜೀವನಾವಧಿಯಲ್ಲಿ ಈ ಯೋಗ ಬರಲೇ ಬೇಕು.
ಜನ್ಮರಾಶಿ ಅಥವಾ ಚಂದ್ರರಾಶಿಯಿಂದ ದ್ವಾದಶನಾಗಿ ಶನಿಯು ಸಂಚರಿಸುವಾಗ ಸಾಡೇಸಾತಿಯು ಆರಂಭವಾಗುತ್ತದೆ. ಮುಂದೆ ಜನ್ಮರಾಶಿ ಮತ್ತು ನಂತರದ ರಾಶಿಯಲ್ಲಿ ಶನಿ ಸಂಚರಿಸುತ್ತಿರಲು ಇದು ಮುಂದುವರೆದು, ಏಳುವರೆ ವರ್ಷಗಳನಂತರ ಮುಕ್ತಾಯವಾಗುತ್ತದೆ. ಇದರರ್ಥ ಜನ್ಮರಾಶಿಯಿಂದ ಶನಿಯು ದ್ವಾದಶ, ಪ್ರಥಮ ಮತ್ತು ದ್ವಿತೀಯ ಈ ಸ್ಥಾನಗಳಲ್ಲಿ (ಅಥವಾ ರಾಶಿಗಳಲ್ಲಿ) ಸಂಚಾರಮಾಡುವ ಕಾಲಾವಧಿಯಷ್ಟು ಏಳರಾಟದ ಪೀಡೆಯಿರುತ್ತದೆ. ಇದನ್ನು ಒಂದು ಉದಾಹರಣೆಯಿಂದ ತಿಳಿದುಕೊಳ್ಳೊಣ. ಇದೇ ತಿಂಗಳ 15ರಂದು ಶನಿಯು ತುಲಾರಾಶಿಯನ್ನು ಪ್ರವೇಶಿಸುತ್ತಾನೆ. ವೃಶ್ಚಿಕವು ತುಲಾರಾಶಿಯ ನಂತರದ ರಾಶಿ, ಆದ್ದರಿಂದ ವೃಶ್ಚಿಕಕ್ಕೆ ತುಲಾ ಹಿಂದಿನರಾಶಿ ಅಥವಾ ಹನ್ನೆರಡನೇಯ ರಾಶಿಯಾಗುತ್ತದೆ, ಆದ್ದರಿಂದ ಶನಿ ತುಲಾ ಪ್ರವೇಶಾರಭ್ಯ ವೃಶ್ಚಿಕಕ್ಕೆ ಏಳರಾಟ ಶುರುವಾಗುತ್ತದೆ. ಶನಿ ಯಾವ ರಾಶಿಯಲ್ಲಿ ಇರುವನು ಅದು ಅವನ ಪ್ರಥಮರಾಶಿ, ಅಂತೆಯೆ ಮೇಲೇ ಹೇಳಿದ ಹಾಗೆ ತುಲಾರಾಶಿಯ ಹಿಂದಿನ ರಾಶಿ ಕನ್ಯಾ. ಕನ್ಯಾರಾಶಿಗೆ ಶನಿಯು ದ್ವಿತೀಯನಾಗುತ್ತಾನೆ. ಆದ್ದರಿಂದ ಕನ್ಯಾ, ತುಲಾ, ವೃಶ್ಚಿಕ ಈ ರಾಶಿಗಳಿಗೆ ಸಾಡೇಸಾತಿ ಕಾಡಾಟ ಇರುತ್ತದೆ. ಮುಂದೆ ಯಾವಾಗ ಶನಿಯು ವೃಶ್ಚಿಕದಲ್ಲಿ ಪ್ರವೇಶಿಸಿದಾಗ ಕನ್ಯಾರಾಶಿಗೆ ಸಾಡೇಸಾತಿ ಮುಕ್ತಾಯವಾಗಿ, ಧನುರಾಶಿಗೆ ಆರಂಭವಾಗುತ್ತದೆ.
ಶನಿ ರಾಶಿಪ್ರವೇಶದ ಕ್ಷಣ ದ್ವಾದಶಸ್ಥರಾಶಿಯ ಎಲ್ಲರಿಗೂ ಒಮ್ಮೆಯೆ ಸಾಡೇಸಾತಿ ಶುರುವಾಗುತ್ತದೆ ಎಂದು ಹೇಳಲಾಗದು. ಜನ್ಮಚಂದ್ರನ ಅಂಶಗಳಿಗೆ ದ್ವಾದಶಸ್ಥಸ್ಥಾನದಲ್ಲಿ ಶನಿಯು ಮಂದಾಗ ಈ ಯೋಗ ಎರ್ಪಡುತ್ತದೆ, ಇದೇ ಸಾಡೇಸಾತೀಯ ಸರಿಯಾದ ನಿರ್ಣಯ ಎಂದು ಕೆಲ ಹಿರಿಯರು ಹೇಳುತ್ತಾರೆ. (ಅಂಶಾತ್ಮಕವಾಗಿ ಸಾಡೇಸಾತಿಯನ್ನು ಕಂಡು ಹಿಡಿಯುವ ವಿಧಾನವನ್ನು ಮುಂದೊಮ್ಮೆ ತಿಳಿಸುತ್ತೇನೆ.)
ಲಗ್ನಕುಂಡಲಿಯಲ್ಲಿ ಚಂದ್ರ, ಲಗ್ನ ಮತ್ತು ರವಿ ಯಾವ-ಯಾವ ಸ್ಥಾನ(ರಾಶಿ)ಗಳಲ್ಲಿ ಇರುತ್ತಾರೆಯೋ ಮತ್ತು ಶನಿಯ ಜೊತೆ ಅವರ ಸಂಬಂಧ ಎಂತಹುದೋ, ಇವುಗಳನ್ನು ಪರಿಶಿಲೀಸಿ ಸಾಡೇಸಾತಿಯ ಫಲವನ್ನು ಅರಿಯಬಹುದು. ಜನ್ಮಕುಂಡಲಿಯಲ್ಲಿ ಶನಿಯು ಉಚ್ಚ, ಸ್ವಕ್ಷೇತ್ರ, ಮಿತ್ರಕ್ಷೇತ್ರದಲ್ಲಿ ಅಥವಾ ಯೋಗಕಾರಕನಾಗಿದ್ದಲ್ಲಿ ಸಾಡೇಸಾತಿಯ ಕಷ್ಟಫಲದಲ್ಲಿ ರಿಯಾಯತಿಯಿರುವುದಾದರೂ ಪೂರ್ಣ ವಿಮುಕ್ತಿ ಇರುವುದಿಲ್ಲ. ಇದೇ ರೀತಿ ಶನಿಯೂ ಅಯೋಗಕಾರಕನೂ, ನೀಚನು, ಶತ್ರುಕ್ಷೇತ್ರಸ್ಥನೂ ಆಗಿದ್ದರೆ ಸಾಡೇಸಾತಿಯು ವಿಶೇಷವಾಗಿ ಅಶುಭ ಫಲಪ್ರದವಾಗಿರುತ್ತದೆ.
ದ್ವಾದಶಭಾವವು ಜಾತಕದಲ್ಲಿ ಕಾಲಿನ ಕಾರಕವಾಗಿರುತ್ತದೆ. ಈ ಸ್ಥಾನದಲ್ಲಿ ಶನಿಸಂಚಾರವಿದ್ದಾಗ ವ್ಯರ್ಥವಾದ ಸಂಚಾರ, ವ್ಯರ್ಥಸ್ಥಳಗಳಿಗೆ ಪ್ರವಾಸ, ವ್ಯಕ್ತಿಯು ಒಳ್ಳೆಯತನವನ್ನು ಬಿಟ್ಟು ದುರ್ಮಾರ್ಗಗಳ ವಿಷಯದಲ್ಲಿ ಪ್ರವೃತ್ತನಾಗುತ್ತಾನೆ. ಕಾಲಿನ ಸಂಬಂಧಿಯಾದ ರೋಗಗಳು, ಮೂಳೆಗಳ ಸಮಸ್ಯೆ ಮುಂತಾದ ದೈಹಿಕ ತೊಂದರೆಗಳುಂಟಾಗುತ್ತವೆ.
ದ್ವಾದಶವು ವ್ಯಯಭಾವ ಎಂದೆನಿಸಿಕೊಳ್ಳಲ್ಪಡುತ್ತದೆ. ಪಂಚಮ ಭಾವವು ಸಂತತಿಯ ಪ್ರತೀಕವಾಗಿದೆ. ಪಂಚಮದಿಂದ ದ್ವಾದಶವು ಅಷ್ಟಮ ಭಾವವಾಗುತ್ತದೆ. ಅಷ್ಟಮವನ್ನು ಮೃತ್ಯು, ಪಾತಾಳ, ರಂದ್ರ ಎಂದೆಲ್ಲ ಸಂಬೋಧಿಸಲಾಗಿದೆ. ಸಾಡೇಸಾತಿಯ ಕಾಲದಲ್ಲಿ ಸಂತತಿಗೆ ಕಷ್ಟ, ಸಂತತಿಯ ನಾಶ ಇತ್ಯಾದಿ ಫಲಗಳನ್ನು ಶಾಸ್ತ್ರಕಾರರು ಹೇಳೆದ್ದಾರೆ. ಆದ್ದರಿಂದ ಈ ಕಾಲಖಂಡದಲ್ಲಿ ಜಾತಕನ ಪುತ್ರಾದಿಗಳಿಗೆ ಕಷ್ಟಗಳು ಉಂಟಾಗುತ್ತವೆ.
ದ್ವಿತೀಯ, ಚತುರ್ಥ ಮತ್ತು ಅಷ್ಟಮಭಾವಗಳ ಮೇಲೆಯೂ ಶನಿಯ ಪ್ರಭಾವವಿರುವುದರಿಂದ ಧನನಾಶ, ಹಾನಿ, ರೋಗ, ದೂರಸಂಚಾರ, ವ್ಯರ್ಥಚಿಂತೆ, ಸಾಲ ಮುಂತಾದ ಫಲಗಳು ಸಹ ಉಂಟಾಗುವವು.
ಮುಂದಿನ ಲೇಖನದಲ್ಲಿ ಶನಿಬಾಧೆಯ ಪರಿಹಾರೋಪಾಯಗಳ ಬಗ್ಗೆ ತಿಳಿಸುತ್ತೇನೆ.
|| ಶ್ರೀಶಾರ್ಪಣಮ್ ||