ಸೂರ್ಯ ಮತ್ತು ಭೂಮಿಯನ್ನು ಸುತ್ತುತ್ತಿರುವ ಚಂದ್ರನ ನಡುವೆ ಭೂಮಿಯು ಬಂದು ಅದರ ನೆರಳು ಚಂದ್ರಬಿಂಬವನ್ನು ಮರೆಮಾಡುವ ಅವಕಾಶೀಯ ವಿದ್ಯಮಾನವೇ ಚಂದ್ರಗ್ರಹಣ. ಇಂಥಹ ವಿದ್ಯಮಾನ ಇದೇ ಡಿಸೆಂಬರ್ 10ರಂದು ಘಟಿಸಲಿದ್ದು ಭಾರತದಾದ್ಯಂತ ಪೂರ್ಣವಾಗಿ ಗೋಚರಿಸಲಿದೆ.
ಭೂಚ್ಛಾಯಾಂ ಸ್ವಗ್ರಹಣೇ ಭಾಸ್ಕರಂ ಅರ್ಕಗ್ರಹಣೇ ಪ್ರವಿಶತಿ ಇಂದುಃ | (ಬೃಹತ್ಸಂಹಿತಾ)
“ಚಂದ್ರನು ತನ್ನ ಗ್ರಹಣದಲ್ಲಿ ಭೂಛಾಯೆಯನ್ನು ಅಂತೆಯೇ ಸೂರ್ಯಗ್ರಹಣದಲ್ಲಿ ಸೂರ್ಯಬಿಂಬವನ್ನು ಪ್ರವೇಶಿಸುತ್ತಾನೆ”. ಇದು ಸುಮಾರು ಐದನೇಯ ಶತಮಾನದಲ್ಲಿ ಇದ್ದ ಭಾರತೀಯ ಜ್ಯೋತಿಷ್ಯದ ಪಿತಾಮಹನಾದ ವರಾಹಮಿಹಿರಾಚಾರ್ಯರ ಸಿದ್ಧಾಂತ. ಇವತ್ತಿಗೆ ಸುಮಾರು ಒಂದುವರೆ ಸಾವಿರ ವರ್ಷಗಳಷ್ಟು ಹಿಂದೆ ನಿಖರವಾಗಿ ಇಂದಿನ ವಿಜ್ಞಾನ ಒಪ್ಪುವಂತೆ ಭಾರತೀಯ ಜ್ಯೋತಿಷ್ಯರು ಈ ಖಗೋಳಿಯ ವಿದ್ಯಮಾನವನ್ನು ವಿಷದವಾಗಿ ವಿವರಿಸಿರುತ್ತಾರೆ.

ಚಂದ್ರ ಗ್ರಹಣ
ಚಂದ್ರನು ಭೂಮಿಯ ನೆರಳಿನಲ್ಲಿ ಪೂರ್ಣವಾಗಿ ಆಚ್ಛಾದಿತನಾದಾಗ ಆ ಗ್ರಹಣವನ್ನು ಪೂರ್ಣ ಚಂದ್ರ ಗ್ರಹಣವೆಂದು ಕರೆಯಲಾಗುತ್ತದೆ. ಚಂದ್ರಬಿಂಬ ಈ ನೆರಳಿನಲ್ಲಿ ಭಾಗಮಾತ್ರ ಪ್ರವೇಶಮಾಡಿದಾಗ ಆಗುವ ಗ್ರಹಣವನ್ನು ಅಂಶ ಅಥವಾ ಪಾರ್ಶ್ವ ಚಂದ್ರಗ್ರಹಣವೆಂದು ಕರೆಯಲಾಗುತ್ತದೆ.
ಭೂಮಿಯ ಸುತ್ತಲು ಸೂರ್ಯನು ಸುತ್ತುವಂತೆ ತೋರುತ್ತದೆ, ಇದು ಭೂಮಿಯ ಮೇಲೆ ನಮಗೆ ಆಗುವ ಸಾಪೇಕ್ಷ ಅನುಭವ. ಚಂದ್ರನು ವಾಸ್ತವವಾಗಿ ಭೂಮಿಯನ್ನು ಸುತ್ತುತ್ತಾನೆ. ಈ ಎರಡೂ ಕಾಯಗಳ ಭೂಮಿಯ ಸುತ್ತ ಇರುವ ಕಕ್ಷೆಗಳನ್ನು ಕಾಂತಿವೃತ್ತ ಮತ್ತು ಚಂದ್ರಕಕ್ಷೆಯೆಂದು ಕ್ರಮವಾಗಿ ಕರೆಯಲಾಗುತ್ತದೆ. ಈ ಎರಡೂ ಕಾಲ್ಪನಿಕ ವೃತ್ತಗಳು ಸಂಧಿಸುವ ಬಿಂದುಗಳನ್ನು ಪಾತಬಿಂದುಗಳೆಂದು ಕರೆಯಲಾಗುತ್ತದೆ. ಇವುಗಳೇ ಜ್ಯೋತಿಷ್ಯಶಾಸ್ತ್ರದಲ್ಲಿ ರಾಹು-ಕೇತುಗಳೆಂಬ ಛಾಯಾಗ್ರಹಗಳೆಂದು ಪ್ರಸಿದ್ಧವಾಗಿವೆ. ರಾಹು-ಕೇತುಗಳು ದೃಶ್ಯ ಕಾಯಗಳಾಗಿರದೇ ಕೇವಲ ಕಾಲ್ಪನಿಕ ಅವಕಾಶಿಯ ಬಿಂದುಗಳಾಗಿವೆ, ಆದ್ದರಿಂದ್ರ ಛಾಯಾಗ್ರಹಗಳೆಂದು ಕರೆಯಿಸಿಕೊಳ್ಳುತ್ತವೆ. ಇಂತಹ ಅದೃಶ್ಯ ಕಾಯಗಳ ಪ್ರಭಾವವನ್ನು ಜ್ಯೋತಿಷ್ಯ ಹೇಳುತ್ತದೆ.
ಯಾವುದೇ ಗ್ರಹಣದಲ್ಲಿ ಸ್ಪರ್ಶ, ಮೋಕ್ಷ, ಸಮ್ಮಿಲನ, ಉನ್ಮಿಲನಾದಿ ಸಂಜ್ಞೆಗಳನ್ನು ಹೇಳಲಾಗುತ್ತದೆ. ಭೂಛಾಯೆಯು ಶಂಕುವಿನ (cone) ಆಕಾರದಲ್ಲಿ ಇರುತ್ತದೆ. ಪ್ರಸಕ್ತ ಪೂರ್ಣ ಚಂದ್ರಗ್ರಹಣದಲ್ಲಿ – ಭೂಛಾಯೆಯನ್ನು ಹೊರಗಡೆಯಿಂದ ಚಂದ್ರಬಿಂಬದ ಪರಿಧಿಯು ಸ್ಪರ್ಶಮಾಡುವುದನ್ನು ಸ್ಪರ್ಶವೆಂದು ಈ ಸಮಯದಿಂದ ಸ್ಪರ್ಶಕಾಲದ ಆರಂಭವೆಂದು ಕರೆಯಲಾಗುತ್ತದೆ. ಮೋಕ್ಷವೆಂದರೆ ಚಂದ್ರಬಿಂಬವು ಭೂಛಾಯೆಯಿಂದ ಹೊರಗೆ ಹೊರಡುವುದು, ಮತ್ತು ಈ ಸಮಯ ಮೋಕ್ಷಕಾಲ. ಚಂದ್ರಬಿಂಬದ ಪರಿಧಿಯು ಭೂಛಾಯೆಯ ಶಂಕುವನ್ನು ಒಳಗಡೆಯಿಂದ ಪ್ರವೇಶಕಾಲದಲ್ಲಿ ಸ್ಪರ್ಶಿಸುವುದನ್ನು ಸಮ್ಮಿಲನವೆಂದು, ನಿರ್ಗಮನಮಾಡುತ್ತಿರುವಾಗ ಸ್ಪರ್ಶಿಸುವುದನ್ನು ಉನ್ಮಿಲನವೆಂದು ಹೇಳಲಾಗುತ್ತದೆ. ಪ್ರಸಕ್ತ ಚಂದ್ರಗ್ರಹಣವು ಕೇತು ಬಿಂದುವಿನಿಂದ ಚಂದ್ರಬಿಂಬದ ಪ್ರವೇಶವಾಗುವುದರಿಂದ ಕೇತುಗ್ರಸ್ತವೆಂದು ಕರೆಯಲಾಗಿದೆ.
(ಈ ವಿಷಯಗಳನ್ನು ಧೀರ್ಘವಾಗಿ ಮತ್ತೊಮ್ಮೆ ಬರೆಯುತ್ತೇನೆ, ಸಧ್ಯ ಅಲ್ಪ ವಿವರಣೆ ಸಾಕು. ಚಿತ್ರಗಳ ಸಹಾಯದಿಂದ ವಿವರಣೆ ಕೊಡುವುದು ಸೂಕ್ತ. ಇಲ್ಲಿ ಫಲವಿವರಣೆಯ ಪ್ರಾಧಾನ್ಯತೆಯಿಂದಾಗ ಗಣಿತವಿವರಣೆ ಪರಿಚಯಾತ್ಮಕ ಮಾತ್ರ, ವಾಚಕರು ಕ್ಷಮಿಸಬೇಕು.)
ಪೂರ್ಣ ಚಂದ್ರಗ್ರಹಣದ ವಿವರ
ಮಾರ್ಗಶೀರ್ಷ ಶುಕ್ಲ ೧೫ ಶನಿವಾರ, ಡಿಸೆಂಬರ್ 10 – 2011
ಸ್ಪರ್ಶ: 06-15 ಸಾಯಂ
ಸಮ್ಮಿಲನ: 07-36 ಸಾಯಂ
ಮಧ್ಯ: 08-02 ರಾತ್ರಿ
ಉನ್ಮಿಲನ: 08-28 ರಾತ್ರಿ
ಮೋಕ್ಷ: 09-48 ರಾತ್ರಿ
ಪುಣ್ಯ ಕಾಲ: 3ಗಂಟೆ 33ನಿಮಿಷ
ವೇಧ ಕಾಲ
“ಚಂದ್ರಗ್ರಹೇ ತು ಪ್ರಹರತ್ರಯಮ್” ಚಂದ್ರಗ್ರಹಣದಲ್ಲಿ ಸ್ಪರ್ಶಕ್ಕಿಂತ ಮೂರುಪ್ರಹರ ಮೊದಲು ವೇಧಾರಂಭ. ಬೆಳಿಗ್ಗೆ 09-45ರಿಂದ ವೇಧಾರಂಬವಿದ್ದು, ಈ ಕಾಲದಲ್ಲಿ ಭೋಜನ-ಜಲಪಾನಾದಿಗಳನ್ನು ಮಾಡಬಾರದು. “ಬಾಲವೃದ್ಧಾತುರಾಣಾಂ ತು ಗ್ರಹಣಯಾಮಾತ್ಪೂರ್ವಮೇಕಾಯಾಮೋ ನಿಷಿದ್ಧಃ” (ನಿರ್ಣಯಸಿಂಧು) ಬಾಲಕರು, ವೃದ್ಧರು, ಗರ್ಭಿಣಿಯರು, ರೋಗಿಗಳು ಮತ್ತು ಅಶಕ್ತರು ಗ್ರಹಣ ಪೂರ್ವ ಒಂದು ಪ್ರಹರದಿಂದ ವೇಧ ಪಾಲಿಸಬೇಕು, ಭೋಜನಾದಿಗಳನ್ನು ಮಧ್ಯಾಹ್ನ 01-30ಯ ವರೆಗೆ ಮಾಡಬಹುದು. ಗ್ರಹಣ ಮೋಕ್ಷಾನಂತರ ಸ್ನಾನ ಪೂಜಾದಿ ಕರ್ಮಗಳನ್ನು ಮಾಡಿ ಭೋಜನ-ಜಲಪಾನವನ್ನು ಮಾಡಬೇಕು. ವೇಧಕಾಲದಲ್ಲಿ ಎಲ್ಲ ಅನ್ನಾದಿಗಳು ವರ್ಜಿತವಾಗಿವೆ ಆದ್ದರಿಂದ ಮೋಕ್ಷಾನಂತರವೇ ಅಡಿಗೆಯನ್ನು ಮಾಡಬೇಕು, ಮೋದಲೇ ತಯಾರಿಸಿದ ಆಹಾರ ದೋಷಯುಕ್ತವಾಗಿರುತ್ತದೆ. ಅಂತೆಯೇ ಕುಡಿಯುವ ನೀರೂ ಸಹ.
ವೇಧಕಾಲದಲ್ಲಿ ನಿತ್ಯದ ಅಡಿಗೆ ಪದಾರ್ಥಗಳ (ಧಾನ್ಯಾದಿಗಳು) ಮೇಲೆ ದರ್ಭೆಯನ್ನು ಇಡುವುದರಿಂದ ಅವು ದೂಷಿತವಾಗುವುದಿಲ್ಲ. ಅಂತೆಯೇ ಇತರ ಸ್ಥಳಗಳಲ್ಲಿ ಶುಚಿತ್ವಕ್ಕಾಗಿ ದರ್ಭೆಯನ್ನು ಉಪಯೋಗಿಸುವುದು ಸೂಕ್ತ. ಗ್ರಹಣಕಾಲದಲ್ಲಿ ಸ್ಪರ್ಶಮಾಡಿದ ವಸ್ತ್ರಗಳನ್ನು ತೊಳೆಯುವುದರಿಂದ ಶುದ್ಧಿ.
(ವೇಧನಿರ್ಣಯವನ್ನು ವಿವಿಧ ಮಠೀಯ ಪಂಚಾಂಗಗಳಲ್ಲಿ ವ್ಯತ್ಯಾಸದಿಂದ ಮಾಡಿರುತ್ತಾರೆ, ಆಯಾ ಮತ, ಸಂಪ್ರದಾಯ, ಮಠದವರು ಆಯಾ ನಿರ್ಣಯಗಳನ್ನು ಅನುಸರಿಸುವುದು ಸೂಕ್ತ. ಮೇಲೆ ಹೇಳಿರುವ ನಿರ್ಣಯ ಸರ್ವಸಾಮಾನ್ಯವಾಗಿ ಎಲ್ಲರಿಗೂ ಅನ್ವಯಿಸುವಂಥದ್ದು.)
ಪುಣ್ಯಕಾಲ (ಪರ್ವಕಾಲ)
“ಚಂದ್ರಸೂರ್ಯಗ್ರಹಣಂ ಯಾವಚ್ಚಾಕ್ಷುಷದರ್ಶನಯೋಗ್ಯಂ ತಾವತ್ಪುಣ್ಯಕಾಲಃ” ಗ್ರಹಣವು ಎಷ್ಟು ಸಮಯ ದರ್ಶನವಾಗುವುದೋ ಅಷ್ಟು ಸಮಯ ಪುಣ್ಯಕಾಲ. ಇದನ್ನೇ ಪರ್ವಕಾಲ ಎಂತಲೂ ಕರೆಯುತ್ತಾರೆ. ಆದ್ದರಿಂದ ಸ್ಪರ್ಶಾರಂಭದಿಂದ ಮೋಕ್ಷದ ವರೆಗೆ 3ಗಂಟೆ 33ನಿಮಿಷ, ಈ ಗ್ರಹಣದಲ್ಲಿ ಪುಣ್ಯಕಾಲವಿರುತ್ತದೆ. ಪುಣ್ಯಕಾಲದಲ್ಲಿ ಸ್ನಾನ, ಜಪ, ಮಂತ್ರ ಪುರಶ್ಚರಣ, ಪಾರಾಯಣಾದಿಗಳಿಗೆ ವಿಶೇಷ ಫಲವಿರುತ್ತದೆ.
ಸ್ನಾನವಿಚಾರ
ಗ್ರಹಸ್ಪರ್ಶಕಾಲೇ ಸ್ನಾನಂ ಮಧ್ಯೇ ಹೋಮಃ ಸುರಾರ್ಚನಂ ಶ್ರಾದ್ಧಂ ಚ ಮುಚ್ಯಮಾನೇ ದಾನಂ ಮುಕ್ತೇ ಸ್ನಾನಮಿತಿ ಕ್ರಮಃ |
ಗ್ರಹಣ ಸ್ಪರ್ಶಕ್ಕೆ ಸ್ನಾನ, ಮಧ್ಯದಲ್ಲಿ ಹೋಮ, ದೇವತಾರ್ಚನೆ, ಮೋಕ್ಷಕ್ಕೆ ಶ್ರಾದ್ಧ, ಮೋಕ್ಷಾನಂತರ ದಾನ ಮತ್ತು ಸ್ನಾನ ಇದು ಗ್ರಹಣ ಕರ್ಮದ ಕ್ರಮವೆಂದು ಹೇಳಲ್ಪಟ್ಟಿದೆ.
ಸ್ನಾನವು ಏಕೆ ವಿದಿತ? – “ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುದರ್ಶನೇ” ಎಲ್ಲ ವರ್ಣ-ಜಾತಿಯವರಿಗೆ ರಾಹುದರ್ಶನ (ಗ್ರಹಣದಲ್ಲಿ) ಆಗುವುದರಿಂದ ಸೂತಕವು (ಮೈಲಿಗೆ) ಹೇಳಲ್ಪಟ್ಟಿದೆ. ಆದ್ದರಿಂದ ಇದರ ವಿಮೋಚನೆಗೆ ಸ್ನಾನ, ದಾನಾದಿಗಳು ಅವಶ್ಯಕ.
ಸರ್ವಂ ಗಂಗಾಮಯಂ ತೋಯಂ ಸರ್ವೇ ವ್ಯಾಸಸಮಾ ದ್ವಿಜಾಃ |
ಸರ್ವಂ ಭೂಮಿಸಮಂ ದಾನಂ ಗ್ರಹಣೇ ಸೂರ್ಯಚಂದ್ರಯೋಃ ||
ಗ್ರಹಣಕಾಲದಲ್ಲಿ ಎಲ್ಲ ನೀರು ಗಂಗಾಸಮವಾಗಿಯೂ, ಎಲ್ಲ ಬ್ರಾಹ್ಮಣರು ವ್ಯಾಸರಿಗೆ ಸಮಾನರಾಗಿಯೂ, ಎಲ್ಲ ದಾನವೂ ಭೂದಾನಕ್ಕೆ ಸಮನಾಗಿಯೂ ಇರುತ್ತದೆ. ಆದ್ದರಿಂದ ಸ್ನಾನ, ದಾನಾದಿಗಳನ್ನು ಅವಶ್ಯವಾಗಿ ಮಾಡಬೇಕು.
ಗ್ರಹಣ ಪ್ರಯುಕ್ತ ಗೋದಾನ, ಭೂದಾನ, ಸುವರ್ಣಾದಿ (ಚಿನ್ನ, ಬೆಳ್ಳಿ, ತಾಮ್ರ) ಲೋಹದಾನ, ಧಾನ್ಯಗಳ ದಾನ, ನೂತನ ವಸ್ತ್ರದಾನಗಳಿಗೆ ಮಹಾಫಲ ವಿರುತ್ತದೆ. ಉಳಿದ ಕಾಲದಲ್ಲಿ ಮಾಡುವ ದಾನಕ್ಕಿಂತಲೂ ಅನೇಕಪಟ್ಟು ಹೆಚ್ಚುಪಟ್ಟು ಪುಣ್ಯವು ಗ್ರಹಣಕಾಲದ ದಾನದಿಂದ ಲಬ್ಧವಾಗುತ್ತದೆ. ತಮಗೆ ಶಕ್ಯವಾದಷ್ಟು ಪ್ರತಿಯೊಬ್ಬರೂ ದಾನಗಳನ್ನು ಮಾಡಬೇಕು.
ದ್ವಾದಶ ರಾಶಿಗಳಿಗೆ ಗ್ರಹಣ ಫಲ
ಈ ಗ್ರಹಣವು ವೃಷಭ ರಾಶಿ – ರೋಹಿಣಿ, ಮೃಗಶಿರಾ ನಕ್ಷತ್ರದಲ್ಲಿ ಸಂಭವಿಸಲಿದೆ. ಆದ್ದರಿಂದ ಮೃಗಶಿರಾ, ರೋಹಿಣಿ ಮತ್ತು ಆರ್ದ್ರಾ ನಕ್ಷತ್ರಗಳಿಗೆ ಗ್ರಹಣ ದೋಷವಿರುತ್ತದೆ. (ಗ್ರಹಣನಕ್ಷತ್ರ, ಹಿಂದಿನ ಮತ್ತು ಮುಂದಿನ ನಕ್ಷತ್ರ ಇವುಗಳಿಗೆ ದೋಷ ತಟ್ಟುತ್ತದೆ, ಶಾಂತಿಕರ್ಮದಿಂದ ಪರಿಹಾರ.)
ಯನ್ನಕ್ಷತ್ರಗತೋ ರಾಹುಃ ಗ್ರಸತೇ ಶಶಿಭಾಸ್ಕರೌ |
ತಜ್ಜಾತಾನಾಂ ಭವೇತ್ಪೀಡಾ ಯೇ ನರಾಃ ಶಾಂತಿವರ್ಜಿತಾಃ || (ವಿಷ್ಣುದರ್ಮ)
ಯಾವ ನಕ್ಷತ್ರದಲ್ಲಿ ಗ್ರಹಣವು ಸಂಭವಿಸುವುದೋ ಆ ನಕ್ಷತ್ರಜಾತರು ಶಾಂತಿಕರ್ಮಗಳನ್ನು ವರ್ಜಿಸಿದರೆ (ಮಾಡದೇ ಇದ್ದರೆ) ಪಿಡೆಯು ಉಂಟಾಗುತ್ತದೆ. (ಮುಂದೆ ಯಾವ ಯಾವ ಶಾಂತಿಕರ್ಮಗಳನ್ನು ಮಾಡಬೇಕು ಎಂಬುದರ ಮಾಹಿತಿಯನ್ನು ಕೊಡುತ್ತೇನೆ.)
ಮೇಷಾದಿ ದ್ವಾದಶ ರಾಶಿಗಳಿಗೆ ಶುಭಾಶುಭ ವಿಚಾರ
ಸ್ವಜನ್ಮರಾಶೇಸ್ತೃತೀಯ ಷಷ್ಠೈಕಾದಶದಶಮ ರಾಶಿಸ್ಥಿತಂ ಗ್ರಹಣಂ ಶುಭಪ್ರದಮ್ |
ಜನ್ಮ ರಾಶಿಯಿಂದ ತೃತೀಯ, ಷಷ್ಠ, ಏಕಾದಶ ಮತ್ತು ದಶಮ ರಾಶಿಯಲ್ಲಿ ಗ್ರಹಣವಿದ್ದರೆ ಶುಭಫಲ. ಪ್ರಸಕ್ತ ಗ್ರಹಣದಲ್ಲಿ ಈ ರಾಶಿಗಳು ಕ್ರಮವಾಗಿ ಈ ರೀತಿಯಾಗಿವೆ – ಮೀನ, ಧನು, ಕರ್ಕ, ಸಿಂಹ – ಈ ರಾಶಿಯವರಿಗೆ ಶುಭಫಲ.
ದ್ವಿತೀಯಸಪ್ತಮನವಮಪಂಚಮಸ್ಥಾನೇಷು ಮಧ್ಯಮಮ್ |
ಜನ್ಮ ರಾಶಿಯಿಂದ ದ್ವಿತೀಯ, ಸಪ್ತಮ, ನವಮ ಮತ್ತು ಪಂಚಮ ರಾಶಿಯಲ್ಲಿ ಗ್ರಹಣವಿದ್ದರೆ ಮಧ್ಯಮ ಅಥವಾ ಮಿಶ್ರಫಲ. ಈ ರಾಶಿಗಳು ಕ್ರಮವಾಗಿ – ಮೇಷ, ವೃಶ್ಚಿಕ, ಕನ್ಯಾ, ಮಕರ – ಈ ರಾಶಿಯವರಿಗೆ ಮಿಶ್ರ ಅಥವಾ ಮಧ್ಯಮ ಫಲ.
ಜನ್ಮಚತುರ್ಥಾಷ್ಟಮದ್ವಾದಶರಾಶಿಸ್ಥಿತಮ್ ಅನಿಷ್ಟಪ್ರದಮ್ |
ಜನ್ಮ ರಾಶಿಯಿಂದ ಪ್ರಥಮ(ಸ್ವರಾಶಿ), ಚತುರ್ಥ, ಅಷ್ಟಮ, ದ್ವಾದಶ ರಾಶಿಯಲ್ಲಿ ಗ್ರಹಣ ಅನಿಷ್ಟ ಪ್ರದವಾಗಿರುತ್ತದೆ. ಈ ರಾಶಿಗಳು ಕ್ರಮವಾಗಿ – ವೃಷಭ, ಕುಂಭ, ತುಲಾ, ಮಿಥುನ – ಈ ರಾಶಿಯವರಿಗೆ ಅಶುಭ ಫಲ.
ಗ್ರಹಣಾದಿಗಳ ಫಲವು ಸಾಮಾನ್ಯವಾಗಿ ಆರು ತಿಂಗಳಿನಿಂದ ವರ್ಷದವರೆಗೆ ಇರುತ್ತದೆ. ಇದು ಕ್ರಮೇಣ ಕ್ಷೀಣಿಸುವ ಪ್ರಭಾವವನ್ನು ಹೊಂದಿರುತ್ತದೆ. ಆದ್ದರಿಂದ ಗ್ರಹಣಫಲಗಳನ್ನು ಕೆಲವು ಜ್ಯೋತಿಷ್ಯರು ಅಷ್ಟು ಅಶುಭಪ್ರದವೆಂದು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಾಮಾನ್ಯವಾಗಿ ಕೆಲವು ದಾನ, ಶಾಂತಿ ಕರ್ಮಗಳಿಂದ ಉಪಶಮನವಾಗುತ್ತದೆ. ಯಾರ ರಾಶಿ-ನಕ್ಷತ್ರದಲ್ಲಿ ಗ್ರಹಣ ಉಂಟಾಗುವುದೋ ಅವರು ದಾನ, ಶಾಂತಿಕರ್ಮಗಳನ್ನು ಅವಶ್ಯವಾಗಿ ಮಾಡಿಕೊಳ್ಳಬೇಕು. ಅಲ್ಲಸಲ್ಲದ್ದನ್ನು ಓದಿ, ಕೇಳಿ ವ್ಯರ್ಥವಾಗಿ ಭಯಪಡಬಾರದು ಮತ್ತು ಇನ್ನೊಬ್ಬರನ್ನು ಭಯಪಡಿಸಬಾರದು. ಸರಿಯಾದ ಮಾಹಿತಿಯನ್ನು ಪಡೆದು ಸೂಕ್ತ ಪರಿಹಾರೋಪಾಯಗಳನ್ನು ಮಾಡಿಸಿಕೊಂಡು ಧೈರ್ಯದಿಂದ ಜೀವನದಲ್ಲಿ ಮುನ್ನಡೆಯಬೇಕು. ಮನುಷ್ಯನ ಜೀವನ ಇಂತಹ ಅನೇಕ ಖಗೋಳಿಯ ವಿದ್ಯಮಾನಗಳ ಮೊತ್ತ, ಆದ್ದರಿಂದ ಒಂದೆರಡು ಘಟನೆಗಳಿಂದ ಭಯಭೀತರಾಗುವುದು ಜಾಣತನವಲ್ಲ.
ಗ್ರಹಣಗಳು ಮುಖ್ಯವಾಗಿ ಮೇದಿನಿ ಎಂಬ ಜ್ಯೋತಿಷ್ಯದ ಅಭ್ಯಾಸಿಕ ಅಂಗ (ಈ ಪ್ರಕಾರ ಇವತ್ತು ಅನುಪಲಬ್ಧ). ದೇಶ, ಸಮಾಜ, ರಾಜಕೀಯ, ಹವಾಮಾನ ಇತ್ಯಾದಿಗಳ ಮೇಲೆ ಗ್ರಹಣಗಳ ಪ್ರಭಾವ ಹೆಚ್ಚು ಇರುತ್ತದೆ.
ಶ್ರೀಶಾರ್ಪಣಮ್ ||
—————————–
ಆಕರಗಳು – ಧರ್ಮಸಿಂಧು, ನಿರ್ಣಯಸಿಂಧು, ವಿವಿಧ ಸ್ಮೃತಿಗಳು, ಮುಹೂರ್ತ ಚಿಂತಾಮಣಿ, ವಿವಿಧ ಪಂಚಾಂಗಗಳು.
Respected sir,
the information furnished is most useful and we will try to follow it
Thank you