ಡಿಸೆಂಬರ್ 10ರ ಚಂದ್ರಗ್ರಹಣವು ರೋಹಿಣಿ ಮತ್ತು ಮೃಗಶಿರಾ ನಕ್ಷತ್ರಗಳಲ್ಲಿ (ವೃಷಭ ರಾಶಿ) ನಡೆಯಲಿದೆ. (ಈ ಕುರಿತು ಹಿಂದಿನ ಲೇಖನವನ್ನು ನೋಡಿ) ಆದ್ದರಿಂದ ತ್ರಿಜನ್ಮ ನಕ್ಷತ್ರಜಾತರಾದ ರೋಹಿಣಿ, ಮೃಗಶಿರಾ ಮತ್ತು ಆರ್ದ್ರಾ – ಈ ನಕ್ಷತ್ರ ಮತ್ತು ರಾಶಿಯವರು ದಾನಗಳನ್ನು ಮಡಬೇಕು. ಚಂದ್ರಗ್ರಹಣಕ್ಕೆ ವಿಶೇಷವಾಗಿ ಚಂದ್ರಬಿಂಬ ಮತ್ತು ನಾಗ ಪ್ರತಿಮೆಯ ದಾನವನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸುವರ್ಣ ಅಥವಾ ಬೆಳ್ಳಿಯ ನಾಗನ ಪ್ರತಿಮೆಯನ್ನು ಘೃತಪೂರ್ಣವಾದ (ತುಪ್ಪಸಹಿತವಾದ) ತಾಮ್ರ ಅಥವಾ ಕಾಸ್ಯದ ಪಾತ್ರೆಯಲ್ಲಿಟ್ಟು ದಕ್ಷಿಣೆಯ ಸಹಿತ ಬ್ರಾಹ್ಮಣರಿಗೆ ದಾನವನ್ನು ಕೊಡಬೇಕು. ಅಂತೆಯೇ ಬೆಳ್ಳಿಯ ಚಂದ್ರಬಿಂಬವನ್ನು ತಯಾರಿಸಿ ಅದನ್ನು ತಾಮ್ರ ಅಥವಾ ಕಾಸ್ಯದ ಪಾತ್ರೆಯಲ್ಲಿಟ್ಟು ದಕ್ಷಿಣೆಯ ಸಹಿತ ದಾನ ಮಾಡಬೇಕು. ಈ ದಾನಗಳ ಜೋತೆಗೆ ಎಳ್ಳು ಮತ್ತು ವಸ್ತ್ರಗಳ ದಾನವೂ ಸಹ ಇಲ್ಲಿ ವಿಧಿತ. ಗ್ರಹಣದ ಅಶುಭ ಫಲವಿರುವರೂ ಈ ದಾನಗಳನ್ನು ಮಾಡಬೇಕು. ಅಶುಭ ಫಲವಿರುವವರು ಮತ್ತು ಗರ್ಭಿಣಿಯರು ಗ್ರಹಣ ದರ್ಶನ ಮಾಡಬಾರದು.
ದಾನಮಾಡುವಾಗ ಹೇಳುವ ಮಂತ್ರ -
ತಮೋಮಯ-ಮಹಾಭೀಮ ಸೋಮಸೂರ್ಯ-ವಿಮರ್ದನ |
ಹೇಮತಾರಪ್ರದಾನೇನ-ಮಮ-ಶಾಂತಿಪ್ರದೋ ಭವ ||
ವಿಧುಂತುದ ನಮಸ್ತುಭ್ಯಂ ಸಿಂಹಿಕಾನಂದನಾಚ್ಯುತ |
ದಾನೇನಾನೇನ ನಾಗಸ್ಯ ಮಾಂ ವೇಧಜಾದ್-ಭಯಾತ್ ||
ಗ್ರಹಣ ನೆಡೆದಿರುವಾಗಲೇ ದಾನವು ವಿಹಿತವಾಗಿದೆ, ಶ್ರೇಷ್ಠವಾಗಿದೆ. ಗ್ರಹಣ ಕಾಲಕ್ಕೆ ಸಂಕಲ್ಪಿಸಿದ ದಾನವನ್ನು ಅವಶ್ಯವಾಗಿ ಕೊಡಬೇಕು. ಗ್ರಹಣ ಕಾಲಕ್ಕೆ ಕೊಡುವ ದಾನಗಳು ಮಹಾಫಲಪ್ರದವಾಗಿರುತ್ತವೆ. ಎಲ್ಲರೂ ಈ ದಾನಗಳಿಂದ ಪುಣ್ಯಪ್ರಾಪ್ತಿಯನ್ನು ಪಡೆಯಬಹುದು. ಶುಭಾಶುಭ ಫಲವಿರುವರು ಸಹ ಸಾಮಾನ್ಯವಾಗಿ ಧಾನ್ಯ, ವಸ್ತ್ರಾದಿಗಳನ್ನು ಎಳ್ಳು ಮತ್ತು ದಕ್ಷಿಣಾಸಹಿತ ಕೊಡಬಹುದು. ಬ್ರಾಹ್ಮಣ ದಂಪತಿಗಳಿಗೆ, ವಟುಗಳಿಗೆ, ಯತಿಗಳಿಗೆ ಮತ್ತು ಬಡವರಿಗೆ ಕೊಡುವ ದಾನ ವಿಶೇಷ ಫಲದಾಯಕ. ಜನ್ಮ ಕುಂಡಲಿಯಲ್ಲಿ ರಾಹು-ಕೇತು ನಿಮಿತ್ತಕ ಕುಯೋಗಗಳು, ದೋಷಗಳು, ಸರ್ಪದೋಷ, ಕಾಲಸರ್ಪ ದೋಷ, ಪಿತೃದೋಷ, ಅನಿಷ್ಟ ನಕ್ಷತ್ರ-ಗ್ರಹಯೋಗಾದಿಗಳು ಗ್ರಹಣಕಾಲದಲ್ಲಿ ಮಾಡುವ ದಾನದಿಂದ ಕಡಿಮೆಯಾಗುತ್ತವೆ. ಮೇಲೆ ಹೇಳಿರುವ ದಾನಗಳು ಇಂದಿನ ಕಾಲದಲ್ಲಿ ಸ್ವಲ್ಪ ಅತಿಯಾಗಿ ತೋರಿದರು ಅನುಕುಲವಿದ್ದವರು ಮಾಡಬಹುದು. ಕೆಲವರು ಸುಮ್ಮನೆ ಶಾಠ್ಯದಿಂದ ಇಂತಹ ವಿಷಯಗಳನ್ನು ಪರಿಹಾಸಮಾಡುವುದು, ತಿರಸ್ಕಾರದಿಂದ ನೋಡುವುದು ತಪ್ಪು. ಸರ್ವಕಾಲದಲ್ಲಿಯು ದಾನವೆಂಬುದು ಶ್ರೇಯಸ್ಕರ. ಪರಿಸ್ಥಿತಿ ನಿಮಿತ್ತ ಈ ದಾನಗಳನ್ನು ಕೊಡಲಾಗದವರು ಕೈಲಾದಷ್ಟನ್ನಾದರೂ ಪ್ರಯತ್ನದಿಂದ ಸಾಧಿಸಿಕೊಳ್ಳಬೇಕು, ಇದರಿಂದ ಮುಂದೆ ಸ್ಥಿತಿಯಲ್ಲಿ ಸುಧಾರಣೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ದಾನಗಳು ಅನೇಕ ಅಂತೆಯೇ ಅದರ ಫಲಗಳು ಅನೇಕ. ಶಕ್ಯವಾದದ್ದನ್ನು ಅವಶ್ಯ ದಾನಮಾಡಬೇಕು. ದಾನವೆಂಬುದು ಧರ್ಮದ ಒಂದು ಆಧಾರಸ್ಥಂಭ. ಶಕ್ತಿಮೀರಿ ಅತೀಸಾಹಸ ಮಾಡಿ ದಾನ ಮಾಡಬಾರದು, ತಮ್ಮ ಮಿತಿಯಿದ್ದಷ್ಟು ದಾನವನ್ನು ಮಾತ್ರ ಅವಶ್ಯ ಬಿಡಬಾರದು. ಗ್ರಹಪೀಡಾದಿ ಸಮಸ್ತ ದೋಷಗಳು ದಾನದಿಂದ ನಿರ್ಮೂಲವಾಗುವುದು ಶಾಸ್ತ್ರವಿಧಿ ಮತ್ತು ಅನುಭವಜನ್ಯ. (ದಾನ ಮತ್ತು ಅದರ ಮಹತಿಯ ಬೆಗೆಗೆ ಮುಂದೆ ಅನೇಕ ಲೇಖನಗಳನ್ನು ಬರೆಯುವ ವಿಚಾರವಿದೆ.)
ಸ್ನಾನವಿಚಾರವನ್ನು ಹಿಂದಿನ ಲೇಖನದಲ್ಲಿ ಹೇಳಿರುವ ಹಾಗೆ ಮಾಡಬೇಕು. ಗ್ರಹಣಕಾಲದಲ್ಲಿ ವನಸ್ಪತಿಯುಕ್ತ ಮಂತ್ರೌಷಧಿಸ್ನಾನವನ್ನು ಸಹ ಮಾಡುವುದು ಶ್ರೇಷ್ಠ. (ಇದರ ಬಗ್ಗೆ ಮಾಹಿತಿಯನ್ನು ಮುಂದೆ ನೋಡೋಣ.)
ಗ್ರಹಣ ಪರ್ವಕಾಲದಲ್ಲಿ ಜಪ-ಪಾರಾಯಣ, ಮಂತ್ರ ಪುರಶ್ಚರಣಾದಿಗಳಿಗೆ ಮಹಾಫಲವಿರುತ್ತದೆ. ಕುಲದೇವರ, ಇಷ್ಟದೇವರ, ಗುರುಗಳ ಸ್ತೋತ್ರ ಪಾರಾಯಣ ಮಾಡಬೇಕು. ನವಗ್ರಹ ಸ್ತೋತ್ರ, ರಾಹು-ಕೇತು ಚಂದ್ರಗ್ರಹ ಜಪಗಳನ್ನು ಮಾಡಬೇಕು.
ಗಾಯತ್ರೀ, ವಿಷ್ಣುಸಹಸ್ರನಾಮ ಸ್ತೋತ್ರ, ಉಪದೇಶವನ್ನು ಪಡೆದ ಮಂತ್ರ-ಸ್ತೋತ್ರಗಳು ಪರ್ವಕಾಲದಲ್ಲಿ ಜಪ-ಪುರಶ್ಚರಣ ಮಾಡುವುದರಿಂದ ಅವುಗಳಲ್ಲಿ ಶಕ್ತಿಸಂಚಾರವಾಗುತ್ತವೆ. ಗುರುಗಳಿಂದ ಉಪದಿಷ್ಟವಾದ ಮಂತ್ರಗಳ ಜಪವನ್ನು ಗ್ರಹಣಕಾಲದಲ್ಲಿ ಮಾಡದೇ ಇದ್ದರೆ ಮಂತ್ರಗಳು ಮಾಲಿನ್ಯದಿಂದಾಗಿ ನಿರರ್ಥಕವಾಗುತ್ತವೆ. ನವಗ್ರಹ ಪೀಡಾಪರಿಹಾರ ಸ್ತೋತ್ರದ ಪಾರಾಯಣದಿಂದ ದೋಶನಾಶ ಮತ್ತು ಲಾಭ.
ಇದು ವೈಜ್ಞಾನಿಕ ಯುಗ, ಈ ಕಾಲದಲ್ಲಿ ಗ್ರಹಣ, ಗ್ರಹಪೀಡೆ ಇತ್ಯಾದಿಗಳನ್ನು ನಂಬಬಾರದು ಎಂದು ಸಾರುವ ಒಂದು ವರ್ಗವಿದ್ದಂತೆ, ವಿಪರೀತ ಧರ್ಮವನ್ನು ಭಯಹುಟ್ಟಿಸುವ ಮಟ್ಟಕ್ಕೆ ಬೋಧಿಸುವ ಇನ್ನೊಂದು ವರ್ಗವೂ ಇದೆ. ಕೆಲವರು ಇವರಿಬ್ಬರನ್ನೂ ಸರಿಯಾಗಿ ತನ್ನ ಲಾಭಕ್ಕಾಗಿಯೇ ಬಳಸಿಕೊಳ್ಳುತ್ತಿರುವುದು ಎಲ್ಲರಿಗೂ ವೇದ್ಯ. ಶಾಸ್ತ್ರ ಮತ್ತು ಧರ್ಮ ಯಾವಾಗಲೂ ಮರ್ಯಾದೆಯ ಅಧೀನವಾಗಿರುತ್ತದೆ, ಕೆಲವರು ಸ್ವಾರ್ಥಕ್ಕೋ ದುರುದ್ದೇಶಕ್ಕೋ ಅಥವಾ ಅಪಪ್ರಚಾರಕ್ಕೋ ಅದನ್ನು ಬಳಸಿಕೊಳ್ಳುತ್ತಿದ್ದರೆ ಅದು ಅವರ ಅಯೋಗ್ಯತೆಯಿಂದಾಗಿ, ಹೊರತು ಧರ್ಮಕ್ಕೆ ಬಾಧಕವಲ್ಲ. ವಿವೇಕ, ತಾಳ್ಮೆ, ಸರಿಯಾದ ತಿಳುವಳಿಕೆ ಮತ್ತು ಅಧ್ಯಯನವೇ ನಮ್ಮನ್ನು ಅಜ್ಞಾನದಿಂದ ದೂರ ಮಾಡುತ್ತವೆ. ಎಲ್ಲರನ್ನು ಧಾರಣ ಮಾಡುವ ಸಾಮರ್ಥ್ಯ ಧರ್ಮಕ್ಕೆ ಇದೆ, ಆದ್ದರಿಂದ ಧರ್ಮಾಚರಣೆ ಸರ್ವಕಾಲಕ್ಕೂ ವಿಹಿತ.
ಶ್ರೀಶಾರ್ಪಣಮಸ್ತು ||
—————————–
ಆಕರಗಳು – ಧರ್ಮಸಿಂಧು, ನಿರ್ಣಯಸಿಂಧು, ವಿವಿಧ ಸ್ಮೃತಿಗಳು, ಮುಹೂರ್ತ ಚಿಂತಾಮಣಿ, ವಿವಿಧ ಪಂಚಾಂಗಗಳು.