ನಾವು ಜ್ಯೋತಿಷಿಗಳ ಹತ್ತಿರ ಹೋದಾಗ ರಾಜಯೋಗ, ವಿಪರೀತ ರಾಜಯೋಗ, ಮೃತ್ಯುಯೋಗ, ಷಡಷ್ಟಕ ಯೋಗ, ಕಾಳಸರ್ಪ ಯೋಗ ಇತ್ಯಾದಿ ಅನೇಕ ಭಯಜನಕ ಯೋಗನಾಮಗಳನ್ನು ಕೇಳುತ್ತೇವೆ. ಆದರೆ ಈ ಭಯ ಹುಟ್ಟಿಸುವ ಯೋಗಗಳ ಗುರಿ ಭಯಜನಕ ಯೋಗಗಳಾಗಿ ಮಾತ್ರ, ಜೀವಮಾನದ ಕೇವಲ ಕೆಲವು ಸಂದರ್ಭ ಅಥವಾ ಕಾಲಖಂಡಗಳಲ್ಲಿ ಅವುಗಳು ಅನುಭವಕ್ಕೆ ಬರುತ್ತವೆ. ಇದರರ್ಥ ಇವು ನಿರರ್ಥಕ ಅಥವಾ ಉಪೇಕ್ಷಣೀಯವೆಂದು ಸರ್ವಥಾ ಅಲ್ಲ, ಇಂಥ ಯೋಗಗಳಿದ್ದಾಗ ಸೂಕ್ತ ಉಪಾಯ ಅಗತ್ಯ. ಜ್ಯೋತಿಷ್ಯದಲ್ಲಿ ಅನೇಕ ಯೋಗಗಳಿವೆ, ಕೆಲವು ಜಾತಕದಲ್ಲಿ ಅತ್ಯಂತ ಸ್ಪಷ್ಟವಾಗಿ ಗೋಚರಿಸತಕ್ಕಂಥವು. ಇವುಗಳ ಪ್ರಾಮುಖ್ಯತೆ ಎಷ್ಟೆಂದರೆ ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಇವುಗಳ ಪ್ರಭಾವ-ಫಲಗಳನ್ನು ನಿರ್ದಿಷ್ಟವಾಗಿ ಗುರುತಿಸಬಹುದು. ಆಯುರ್ಮಾನವಿಡೀ ಇವುಗಳ ಪ್ರಭಾವ. ಇವು ದೋಷಗಳಲ್ಲ, ಆದ್ದರಿಂದ ಯಾವುದೇ ಪ್ರಾಯಶ್ಚಿತ್ತ, ಶಾಂತಿಕರ್ಮಗಳ ಅವಶ್ಯಕತೆಯೂ ಇಲ್ಲ. ಆದರೆ ಈ ಯೋಗಗಳನ್ನು ಗುರುತಿಸಿಕೊಂಡು ಇವುಗಳಿಂದ ಆಗುವ ಫಲಾಫಲಗಳನ್ನು ಅರಿತು ನಾವು ನಮ್ಮ ಜೀವನದ ಪ್ರತಿಯೊಂದು ಕೆಲಸ ಕಲಾಪಗಳಲ್ಲಿ ಮಾರ್ಗದರ್ಶಕಗಳಾಗಿ ಇವುಗಳನ್ನು ಬಳಸಿಕೊಳ್ಳಬಹುದು. ಇವತ್ತಿನ ಪ್ರಾಯಃ ಅನೇಕ ಜ್ಯೋತಿಷ್ಯರು ಇಂಥ ಉಪಯುಕ್ತ, ಸಹಾಯಕ ಯೋಗಗಳ ಬಗ್ಗೆ ತಾಳಿರುವ ನಿರ್ಲಕ್ಷ ವಿಚಿತ್ರವಾದದ್ದು (ಬೆದರಿಕೆ ಯೋಗ ಹೇಳಿ ಹೇಳಿ ಅಭ್ಯಾಸವಾಗಿದ್ದಿರಬಹುದೇನೋ!). ಇಂಥಹ ಕೆಲವು ಯೋಗಗಳನ್ನು ಪರಿಚಯಿಸಿದರೆ ವಾಚಕವೃಂದಕ್ಕೆ ಸಹಾಯಕವಾಗುವುದು ಎಂದು ನಂಬಿದ್ದೇನೆ.
ಈ ಲೇಖನಗಳಲ್ಲಿ ವಾಸಿ ಮತ್ತು ವೇಶಿಯೋಗಗಳೆಂಬ ಎರಡು ಅತ್ಯಂತ ಸರಳ ಯೋಗಗಳ ಬಗ್ಗೆ ನೋಡೋಣ. ಈ ಎರಡೂ ಯೋಗಗಳು ಸೂರ್ಯ ಅಥವಾ ರವಿಯು ಇರುವ ಮನೆಯಿಂದ ತಿಳಿಯಲ್ಪಡುತ್ತವೆ. ಚಂದ್ರ, ರಾಹು, ಕೇತುಗಳು ಈ ಯೋಗದಲ್ಲಿ ವಿನಾಯಿತರು.
ವಾಸಿಯೋಗ -
ಚಂದ್ರನನ್ನು ಹೊರತುಪಡಿಸಿ ರವಿಯಿಂದ ಹನ್ನೆರಡನೇಯ ಮನೆಯಲ್ಲಿ ಯಾವುದೇ ಗ್ರಹ ಅಥವಾ ಗ್ರಹಗಳು ಇದ್ದಾಗ ಈ ಯೋಗ ಎರ್ಪಡುತ್ತದೆ. (ರಾಹು-ಕೇತುಗಳು ಅಪವಾದವೆಂದು ಲಕ್ಷ್ಯದಲ್ಲಿರಲಿ) ಇಲ್ಲಿ ಗ್ರಹಗಳ ಶುಭಾಶುಭ ಪ್ರಯುಕ್ತ ಎರಡು ಯೋಗಗಳುಂಟಾಗುತ್ತವೆ. ಶುಭಗ್ರಹಗಳಾದ ಬುಧ-ಗುರು-ಶುಕ್ರ ಇವರು ರವಿಯಿಂದ ಹನ್ನೆರಡರಲ್ಲಿ ಇದ್ದಾಗ ಶುಭವಾಸಿ ಯೋಗ. ಅಶುಭ ಅಥವಾ ಪಾಪಗ್ರಹಗಳಾದ ಕುಜ(ಮಂಗಳ)-ಶನಿ ಇವರಿಂದ ಅಶುಭವಾಸಿ ಯೋಗ. ಗ್ರಹಗಳು ತಮ್ಮ ಸ್ವಕ್ಷೇತ್ರ, ಮೂಲತ್ರಿಕೋಣ, ಉಚ್ಚ, ಮಿತ್ರಾದಿ ರಾಶಿಗಳಲ್ಲಿ ರವಿಯಿಂದ ಹನ್ನೆರಡನೇಯವರಾದರೆ ಯೋಗದ ಶುಭಫಲದಾಯಕ ಸಾಮರ್ಥ್ಯ, ಪ್ರಾಬಲ್ಯ ಹೆಚ್ಚು. ಇದಕ್ಕೆ ವಿಪರೀತ ಗ್ರಹಗಳು ನೀಚ, ಅಸ್ತ, ಶತ್ರು ಕ್ಷೇತ್ರಗಳಲ್ಲಿ ಇದ್ದಾಗ ಅಶುಭಫಲದ ಪ್ರಾಬಲ್ಯ.
ಇನ್ನು ಈ ಯೋಗದ ಫಲಾದೇಶವನ್ನು ನೋಡಿ – ಶುಭವಾಸಿಯೋಗದಲ್ಲಿ ಹುಟ್ಟಿರುವವರು ತನ್ನ ಕಾರ್ಯದಲ್ಲಿ ದಕ್ಷನಾಗಿರುತ್ತಾನೆ. ಪ್ರಸನ್ನನು, ನಿಪುಣನು, ವಿದ್ಯಾವಂತನು, ಗುಣವಂತನು, ಚತುರನೂ ಆಗಿರುತ್ತಾನೆ. ಕೌಟುಂಬಿಕ ಸುಖ ಹೇರಳವಾಗಿರುತ್ತದೆ. ಆಪ್ತೇಷ್ಟರು ಬಂಧುಗಳು ಸದಾ ಇವನನ್ನು ಆಶ್ರಯಿಸಿರುತ್ತಾರೆ (ಇದು ಇಂದಿನ ಕಾಲಕ್ಕೆ ಕೆಲವರಿಗೆ ಸ್ವಲ್ಪ ಕಷ್ಟದಾಯಕವಾಗಬಹುದು!). ಈ ಯೋಗಜಾತರು ಮುಗ್ಧರು ಮತ್ತು ತುಸು ಮೃದು ಸ್ವಭಾವದವರಾಗಿರುತ್ತಾರೆ, ಆದ್ದರಿಂದ ಕೆಲವೊಮ್ಮೆ ಪೇಚಿಗೆ ಸಿಕ್ಕಿಹಾಕಿಕೊಳ್ಳುವ ಸಂಭವವಿರುತ್ತದೆ. ಯಾರಿಗೂ ಯಾವುದೆ ವಾಯಿದೆ ಅಥವಾ ಕರಾರನ್ನು ಮಾಡುವಾಗ ದೊಡ್ಡವರ, ಪರಿಣಿತರ ಸಲಹೆಯನ್ನು ಪಡೆಯುವುದು ಯೋಗ್ಯ. ನನ್ನ ಅನುಭವದಲ್ಲಿ ಈ ಯೋಗದವರು ಸ್ವಲ್ಪ ಕೈಗಟ್ಟಿ (ಹಣಕಾಸಿನ ವ್ಯವಹಾರದಲ್ಲಿ) ಮಾಡಿಕೊಂಡರೆ ಒಳ್ಳೆಯದು. ಈ ಯೋಗದವರಿಗೆ ಪರದೇಶಕ್ಕಿಂತಲೂ ಸ್ವದೇಶದಲ್ಲಿ ಹೆಚ್ಚು ಅಭಿವೃದ್ಧಿ.
ಅಶುಭವಾಸಿಯೋಗ ಜಾತಕರಿಗೆ ತನ್ನ ಊರು, ದೇಶವನ್ನು ಬಿಡುವ ಪ್ರಸಂಗ ಬರುತ್ತದೆ. ಪ್ರಬಲವಾದ ಅಶುಭಗ್ರಹ ರವಿಯಿಂದ ದ್ವಾದಶದಲ್ಲಿದ್ದರೆ ಪರದೇಶಗಮನ ಯೋಗ (ಇಚ್ಛುಕರಿಗೆ ಇದು ಸುಯೋಗ). ಆದರೆ ಪರದೇಶಗಮನದಿಂದ ಲಾಭವೆನ್ನುವುದು ಸುಳ್ಳು, ಬರೀ ಗಮನವಷ್ಟೇ, ವ್ಯರ್ಥ ಪರಿಶ್ರಮ ಲಾಭ ಮಾತ್ರ. ಈ ಜಾತಕರು ತಮ್ಮ ಜೀವನದಲ್ಲಿ ಕೆಲವೊಮ್ಮೆ ದೊಡ್ಡ ಪ್ರಮಾದಗಳನ್ನೆ ಮಾಡಿಬಿಡುತ್ತಾರೆ, ತತ್ಪರಿಣಾಮವಾಗಿ ಅದು ಅವರನ್ನು ಜೀವನದುದ್ದಕ್ಕೂ ಸತಾಯಿಸುತ್ತಿರುತ್ತದೆ. ಇವುರು ಮುಂಗೋಪಿಗಳು, ಜಗಳಗಂಟರೂ, ಸೇಡು ತಿರಿಸಿಕೊಳ್ಳುವ ಮನೋಭಾವವನ್ನು ಹೊಂದಿರುತ್ತಾರೆ. ದಕ್ಷತೆಯೆಂಬುದು ಇವರಲ್ಲಿ ದೋಷ. ರವಿಗೆ ಹನ್ನೆರಡರಲ್ಲಿ ಮಂಗಳನಿರಲು ಅತೀ ಚಪಲತೆ, ಎಲ್ಲದರಲ್ಲಿಯೂ ನಿರ್ಲಕ್ಷ. ಈ ಜಾತಕರು ಯಾವಾಗಲೂ ತಮಗಿಂತ ಹಿರಿಯರ ಸಹವಾಸದಲ್ಲಿರುವುದು ಸೂಕ್ತ. ಭಾವನೆಗಳ ಮೇಲೆ ನಿಯಂತ್ರಣ ಅತೀ ಅವಶ್ಯಕ. ಚಿಕ್ಕಂದಿನಿಂದಲೇ ಸರಿಯಾದ ಸಂಸ್ಕಾರಗಳನ್ನು ರೂಢಿಸಿಕೊಂಡು ತಾಳ್ಮೆಯಿಂದ ಬಾಳುವುದೊಂದೇ ಮಾರ್ಗ. ದುಶ್ಚಟಗಳ ತ್ಯಾಗ ಅಥವಾ ನಿಯಂತ್ರಣಮಾಡಬೇಕು. ಈ ಜಾತಕರಿಗೆ ದುಷ್ಟ ಸಹವಾಸ ಬಹುಬೇಗ ಆಗುತ್ತದೆ, ಆ ಕಾರಣದಿಂದಾಗಿ ದುಷ್ಕಾರ್ಯಗಳಲ್ಲಿ ಪ್ರಯುಕ್ತರಾಗುತ್ತಾರೆ, ಸದಾ ಎಚ್ಚರಿಕೆ ಬೇಕು. ದೈವೋಪಾಸನೆ, ಒಳ್ಳೆಯ ಆಹಾರ, ಸಂಯಮ ಇವು ಮಾತ್ರ ಉಪಾಯ.
ಒಂದು ವೇಳೆ ಶುಭ ಮತ್ತು ಅಶುಭ ಎರಡೂ ಗ್ರಹಗಳು ರವಿಯಿಂದ ಹನ್ನೆರಡರಲ್ಲಿ ಬರಲು ಶುಭಾಶುಭ ಫಲಗಳನ್ನು ತಿಳಿಯಬೇಕು. ರವಿಯಿಂದ ದ್ವಾದಶದಲ್ಲಿರುವ ಗ್ರಹಗಳ ಕಾರಕತ್ವಗಳನ್ನು ನೋಡಿ ಫಲನಿರ್ದೇಶ ಮಾಡಬೇಕು. ಬುಧ-ಗುರು-ಶುಕ್ರ ಮತ್ತು ಕುಜ-ಶನಿ ಇವರ ನಡುವೆ ಅನೇಕ ಯೋಗಗಳು ಎರ್ಪಡುತ್ತವೆ, ಅವುಗಳನ್ನು ಅಭ್ಯಸಿಸಿ ಫಲನಿರ್ದೇಶ ಮಾಡಬಹುದು. (ಇದಕ್ಕೆ ಯೋಗ್ಯ ಮಾರ್ಗದರ್ಶನ ಅಗತ್ಯ.)
ದಶಾಕ್ರಮದಲ್ಲಿ ವಾಸಿಯೋಗಕ್ಕೆ ಕಾರಣವಾದ ಗ್ರಹದ ದಶೆ ವಿಶೇಷವಾಗಿ ಪರಿಣಾಮಕಾರಿಯಾಗಿರುತ್ತದೆ. ರವಿ ಮಹರ್ದಶೆಯಲ್ಲಿ ವಾಸಿಯೋಗಕಾರಕ ಗ್ರಹದ ಅಂತರ್ದಶೆಯಲ್ಲಿ ಶುಭಾಶುಭ ಫಲಗಳನ್ನು ನೋಡಬಹುದು.
ನೋಡಿ, ಯಾವ ರೀತಿ ನಾವು ಈ ಸುಲಭ ಯೋಗಗಳನ್ನು ಅರಿತುಕೊಳ್ಳುವುದರ ಮೂಲಕ ನಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ತಂದುಕೊಳ್ಳಬಹುದು. ಜ್ಯೋತಿಷ್ಯವು ಈ ರೀತಿ ಜೀವನಯೋಗವಾಗಿಯೂ ಉಪಯುಕ್ತ.
ಮುಂದಿನ ಲೇಖನದಲ್ಲಿ ವಾಸಿಯೋಗದ ಇನ್ನೂ ಕೆಲವು ಆಯಾಮಗಳ ಕುರಿತು ತಿಳಿಯೋಣ.