ಅರ್ಕ ಸಪ್ತಮೀ, ಭಾನು ಸಪ್ತಮೀ, ಅಚಲಾ ಸಪ್ತಮೀ, ಸೂರ್ಯ ಸಪ್ತಮೀ ಹೀಗೆ ಭಾರತದಾದ್ಯಂತ ಪ್ರಸಿದ್ಧವಾಗಿರುವ ಸೂರ್ಯನ ಜನ್ಮೋತ್ಸವವೇ ರಥ ಸಪ್ತಮೀ. ಸೋಮವಾರ ೩೦/೧/೨೦೧೨ ರಂದು ಈ ಶ್ರೇಷ್ಠದಿವಸವಿದೆ. ಈ ದಿನದಿಂದಲೇ ಸೂರ್ಯನು ಸಮಸ್ತ ಪ್ರಪಂಚಕ್ಕೆ ಬೆಳಕನ್ನು ಕೊಡಲು ಪ್ರಾರಂಭಿಸಿದನು. ಈ ದಿನವೇ ಅವನು ರಥಾರೂಢನಾಗುತ್ತಾನೆ. ಸಂವತ್ಸರವೆಂಬ ಹೆಸರಿನ ತನ್ನ ಒಂದೇ ಚಕ್ರವುಳ್ಳ ವಿಚಿತ್ರ ರಥದಲ್ಲಿ ಆರೂಢನಾಗಿ ಉತ್ತರಾಯಣಾರಭ್ಯ ಸೂರ್ಯ ಉತ್ತರದ ಕಡೆಗೆ ಸರಿಯಲು ಪ್ರಾರಂಭಿಸುತ್ತಾನೆ (ಆಯನಗತಿಯಿಂದ ನಿಜಪೂರ್ವದಿಂದ ಉತ್ತರದ ಕಡೆಗೆ ಸೂರ್ಯೋದಯದ ಚಲನೆ). ಈ ಚಲನೆಯನ್ನು ಪುರಾಣಗಳಲ್ಲಿ ಸೂರ್ಯನು ರಥಾರೂಢನಾಗಿ ಸಮಸ್ತ ಬ್ರಹ್ಮಾಂಡವನ್ನು ಪರಿಭ್ರಮಿಸುತ್ತಿರುವಂತೆ ಚಿಂತಿಸಲಾಗಿದೆ. ಪ್ರಾಯಶಃ ಎಲ್ಲ ಪುರಾಣಗಳಲ್ಲಿ ಸೂರ್ಯನ ಅದ್ಭುತವಾದ ರಥ ಮತ್ತು ಅದರಲ್ಲಿ ಆಸೀನ ಸೂರ್ಯನಾರಾಯಣನ ಮಹಿಮೆ ವರ್ಣಿಸಲಾಗಿದೆ.

ರಥಾರೂಢನಾದ ಭಾಸ್ಕರ
ಸೂರ್ಯನ ರಥವು ವೇದಮಯವಾಗಿದ್ದು ಏಕಚಕ್ರವನ್ನು ಉಳ್ಳದ್ದಾಗಿದೆ. ಮೂಹುರ್ತಕಾಲಮಾತ್ರದಲ್ಲಿ ಮೂವತ್ತ್ನಾಲ್ಕು ಲಕ್ಷ ಎಂಟುನೂರು ಯೋಜನ ವೇಗದಲ್ಲಿ ಮೇರುಪರ್ವತವನ್ನು ಸುತ್ತುತ್ತಲಿರುತ್ತದೆ. ಪೂರ್ವದಲ್ಲಿ ಇಂದ್ರನ ದೇವಧಾನಿಯೆಂಬ ಪಟ್ಟಣ, ದಕ್ಷಿಣದ ಯಮನ ಸಂಯಮನೀಪುರ, ಪಶ್ಚಿಮದ ವರುಣನ ನಿಮ್ಲೋಚನೀ ಮತ್ತು ಉತ್ತರಕ್ಕೆ ಚಂದ್ರನ ವಿಭಾವರೀಪುರಿಯೆಂಬ ನಾಲ್ಕು ದಿವ್ಯ ಪಟ್ಟಣಗಳು ಮೇರುವಿನ ನಾಲ್ಕುದಿಕ್ಕುಗಳಲ್ಲಿದ್ದು ಇವು ಸೂರ್ಯನಿಂದ ಸಂದರ್ಶಿಸಲ್ಪಡುತ್ತವೆ. ಏಕಚಕ್ರವುಳ್ಳ ರಥವನ್ನು ಅದೃಶ್ಯ ಹಗ್ಗದಿಂದ ಮೇರುವಿನ ಸುತ್ತಲೂ ತಿರುಗಿಸುವುದು ಪ್ರವಹನಾಮಕ ವಾಯು. ಸಂವತ್ಸರವೇ ಈ ರಥದ ಚಕ್ರ. ಗಾಯತ್ರ್ಯಾದಿ ಸಪ್ತ ಛಂದಸ್ಸುಗಳೇ ಕುದುರೆಗಳು. ಅರುಣನೇ ಸಾರಥಿ. ಸ್ವಾಮಿಯಾದ ಸೂರ್ಯನನ್ನು ಸದಾ ನೋಡುತ್ತಲೇ ಇವನ ಸಾರಥ್ಯ. ಅರವತ್ತು ಸಾವಿರ ವಾಲಖಿಲ್ಯರೆಂಬ ಪುಟ್ಟ ಗಾತ್ರದ ಋಷಿಗಳು ಸ್ವಸ್ತಿವಾಚನ ಮಾಡುತ್ತ ರಥದ ಮುಂಬಾಗದಲ್ಲಿರುತ್ತಾರೆ. ಋಷಿ, ದಂಧರ್ವ, ಅಪ್ಸರಾ, ನಾಗ, ಯಕ್ಷ, ರಾಕ್ಷಸ ಮತ್ತು ದೇವತೆಗಳೆಂಬ ಏಳು ಭೃತ್ಯಗಣಗಳು ರಥಸ್ವಾಮಿಯಾದ ಸೂರ್ಯನಾರಾಯಣನನ್ನು ಸದಾ ಸೇವಿಸುತ್ತಿರುತ್ತಾರೆ. ಈ ರೀತಿ ಭಗವಾನ್ ಭಾಸ್ಕರನು ಕಾಲಪುರುಷನಾಗಿ ಇಡೀ ಬ್ರಹ್ಮಾಂಡವನ್ನು ಸುತ್ತುತ್ತ ಜಗತ್ಸಾಕ್ಷಿಯಾಗಿದ್ದಾನೆ. ಇಂತಹ ಸುಂದರ ವರ್ಣನೆ (೫ನೇ ಸ್ಕಂದ) ಶ್ರಿಮದ್ಭಾಗವತದಲ್ಲಿ ಬರುತ್ತದೆ. ವಿಷ್ಣುಪುರಾಣವೂ ಇದೇ ತರಹದ ವಿವರಗಳನ್ನು ಕೊಡುತ್ತದೆ.
ಈ ಪ್ರಕಾರ ದಿವ್ಯರಥಾರೂಢನಾಗಿ ಉದಯಿಸುವ ಶ್ರೀಸೂರ್ಯನಾರಾಯಣನ ವಿಶಿಷ್ಟ ಉಪಾಸನೆಯ ಹಬ್ಬವೇ ರಥಸಪ್ತಮೀ. ಈ ದಿನ ಅರುಣೋದಯ ಕಾಲದಲ್ಲಿ ಸ್ನಾನ, ಸೂರ್ಯನಿಗೆ ಅರ್ಘ್ಯ, ನಮಸ್ಕಾರಾದಿಗಳನ್ನು ಮಾಡುವುದು ಅತ್ಯಂತ ಪುಣ್ಯಪ್ರದ.
ಮಾಘೇಮಾಸಿ ಸಿತೇಪಕ್ಷೇ ಸಪ್ತಮೀ ಕೋಟೀಭಾಸ್ಕರಾ |
ಕುರ್ಯಾತ್ ಸ್ನಾನಾರ್ಘ್ಯ ದಾನಾಭ್ಯಾಂ ಆಯುರಾರೋಗ್ಯಸಂಪದಃ || (ಭವಿಷ್ಯೋತ್ತರ ವಚನ)
ಮಾಘಮಾಸದಲ್ಲಿ ಬರುವ ಶುಕ್ಲ ಸಪ್ತಮಿತು ಕೋಟಿ ಸೂರ್ಯರಿಗೆ ಸಮಾನವಾಗಿದೆ. ಈ ದಿನ ಸ್ನಾನ, ಸೂರ್ಯಾರ್ಘ್ಯ, ದಾನಾದಿಗಳನ್ನು ಮಾಡುವುದು ಆಯುಷ್ಯ, ಆರೋಗ್ಯ ಮತ್ತು ಸಂಪತ್ತನ್ನು ತಂದುಕೊಡುತ್ತದೆ.
ರಥ ಸಪ್ತಮೀಯು ಯಾವಾಗಲೂ ಅರುಣುದೋಯವ್ಯಾಪಿನಿಯಾಗಿರುವುದರಿಂದ ಸರಿಯಾಗಿ ಸೂರ್ಯೋದಯಕ್ಕೆ ಆಚರಣೆ ಮಾಡಬೇಕು. ರಥ ಸಪ್ತಮಿಯಂದು ಸೂರ್ಯೋದಯ ಕಾಲಕ್ಕೆ ಸ್ನಾನ ಮಾಡಬೇಕು. ಎಕ್ಕೆ ಎಲೆಯನ್ನು ತಲೆ ಮತ್ತು ಹೆಗಲ ಮೇಲೆ ಇಟ್ಟುಕೊಂಡು ಸ್ನಾನಮಾಡುವುದು ವಿಶೇಷ. ಸ್ನಾನಕಾಲಕ್ಕೆ ಪಠಿಸಬೇಕಾದ ಮಂತ್ರಗಳು -
ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ || ೧ ||
ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ || ೨ ||
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ |
ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮೀ || ೩ ||
ಹೀಗೆ ಯಾರು ಈ ಮೂರು ಮಂತ್ರೋಚ್ಚಾರಣ ಪೂರಕ ಸ್ನಾನ ಮಾಡಿ ಸೂರ್ಯ ಮತ್ತು ಕೇಶವನ ದರ್ಶನವನ್ನು ಮಾಡುತ್ತಾರೋ, ಅವರು ಕ್ಷಣಮಾತ್ರದಲ್ಲಿ ಪಾಪಗಳಿಂದ ಮುಕ್ತರಾಗುವರು. (ನಿರ್ಣಯಸಿಂಧು)
ಸ್ನಾನಾನಂತರ ಸೂರ್ಯ ಮತ್ತು ಸಪ್ತಮಿತಿಥಿಗೆ ಅರ್ಘ್ಯ -
ಒಂದು ತಾಮ್ರದ ಕಲಶದಲ್ಲಿ (ತಂಬಿಗೆ) ಶುದ್ಧವಾದ ಜಲ, ಅಕ್ಷತೆ, ಚಂದನ, ಬಿಳಿಬಣ್ಣದ ಹೂವುಗಳು, ಗರಿಕೆ, ಎಕ್ಕೆಯ ಎಲೆಗಳನ್ನು ತುಂಬಿಸಿ, ಮುಂದಿನ ಮಂತ್ರಗಳಿಂದ ಸೂರ್ಯ ಮತ್ತು ಸೂರ್ಯಜನನೀಯಾದ ಸಪ್ತಮೀ ತಿಥಿಗೂ ಸಹ ಅರ್ಘ್ಯವನ್ನು ಕೊಡಬೇಕು.
ಸೂರ್ಯಾರ್ಘ್ಯ ಮಂತ್ರ -
ಸಪ್ತಸಪ್ತಿವಹ ಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ || ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು.
ಸಪ್ತಮೀ ಅರ್ಘ್ಯಮಂತ್ರ -
ಜನನೀ ಸರ್ವಲೋಕಾನಾಂ ಸಪ್ತಮೀ ಸಪ್ತಸಪ್ತಿಕೇ |
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯಮಂಡಲೇ || ಎಂದು ಸಪ್ತಮೀ ತಿಥಿಯ ಕುರಿತು ಅರ್ಘ್ಯ ಕೊಡಬೇಕು.
‘ನಮಸ್ಕಾರ ಪ್ರಿಯೋ ಭಾನುಃ’ ಸೂರ್ಯನಮಸ್ಕಾರದಿಂದ ಆರೋಗ್ಯಪ್ರಾಪ್ತಿ. ಈ ದಿನದಿಂದ ನಿತ್ಯ ಸೂರ್ಯನಮಸ್ಕಾರ ನಿಯಮವನ್ನು ಪಾಲಿಸಬಹುದು. ‘ಆರೋಗ್ಯಂ ಭಾಸ್ಕರಾದಿಚ್ಛೇತ್’ ಆರೋಗ್ಯಸುಖವನ್ನು ಭಾಸ್ಕರನಿಂದ ಪಡೆಯಬೇಕು ಎಂಬುದು ಮತ್ಸ್ಯಪುರಾಣ ವಚನ. ಸೂರ್ಯ, ರಾಮ, ಶ್ರೀನಿವಾಸ, ಶಿವ, ಆಂಜನೇಯ ದೇವರ ದರ್ಶನ. ಸೂರ್ಯನಿಗೆ ದೀಪಗಳಿಂದ ಆರತಿಯೆತ್ತಬೇಕು. ಅರ್ಕಸಪ್ತಮಿಯಂದು ಅರ್ಕಪತ್ರದಲ್ಲಿ ದೀಪವನ್ನಿಟ್ಟು ಜಲದಲ್ಲಿ ವಹನ ಮಾಡುವ ಸಂಪ್ರದಾಯವೂ ಇದೆ. ಮನೆಯ ಮುಂದೆ ಅಥವಾ ದೇವಗ್ರಹದ ಎದುರು ಸೂರ್ಯರಥದ ರಂಗವಲ್ಲಿಯನ್ನು ಹಾಕಿ, ಪುಷ್ಪಗಳಿಂದ ಅಲಂಕರಿಸುವುದು.
ದಾನಗಳು – ತಾಮ್ರ ಮತ್ತು ಬೆಲ್ಲವನ್ನು ದಕ್ಷಿಣಾಸಹಿತವಾಗಿ ಬ್ರಾಹ್ಮಣರಿಗೆ ದಾನಮಾಡಬೇಕು. ಕೆಂಪು ಬಣ್ಣದ ವಸ್ತ್ರದಾನವನ್ನು ಮಾಡಬಹುದು.
ಪಾರಾಯಣ – ಅರುಣ ಪ್ರಶ್ನ, ಸೌರಸೂಕ್ತ, ಆದಿತ್ಯ ಹೃದಯ, ಸೂರ್ಯ ಕವಚ, ಸೂರ್ಯಮಂಡಲ ಸ್ತೋತ್ರ, ಸೂರ್ಯಸ್ತವ, ಚಾಕ್ಷುಷೋಪನಿಷತ್ತು, ರಾಮರಕ್ಷಾಸ್ತೋತ್ರ, ವಿಷ್ಣುಸಹಸ್ರನಾಮ, ಸೂರ್ಯಸಹಸ್ರನಾಮ ಮುಂತಾದವುಗಳನ್ನು ಸ್ನಾನಾನಂತರ ಸೂರ್ಯೋದಯಕಾಲಕ್ಕೆ ಪಠಿಸುವುದು. (ಇವುಗಳಲ್ಲಿ ಕೆಲವನ್ನು ಪ್ರಕಟಿಸಲಾಗುವುದು.)
ರಥಸಪ್ತಮಿಯ ಪರ್ವ ಎಲ್ಲ ರಾಶಿಯವರಿಗೂ ವಿಶೇಷ ಫಲಪ್ರದ. ಸೂರ್ಯನು ಯಾವುದೇ ಜಾತಕದಲ್ಲಿ ಆತ್ಮರೂಪಿಯಾಗಿ ಇರುತ್ತಾನೆ, ಆದ್ದರಿಂದ ಅವನ ಪ್ರೀತ್ಯರ್ಥ ಪೂಜಾಕಾರ್ಯ ಆರೋಗ್ಯ, ಸಂಪತ್ತು ಮತ್ತು ಆನಂದಪ್ರದ.